ಪೆಹ್ಲು ಖಾನ್ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರದ ನಿರ್ಲಕ್ಷ: ಮಾಯಾವತಿ ಆರೋಪ

Update: 2019-08-16 15:10 GMT

ಲಕ್ನೋ, ಆ.16: ರಾಜಸ್ಥಾನದಲ್ಲಿಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದಿಂದಾಗಿಯೇ ಗುಂಪಿನಿಂದ ಪೆಹ್ಲು ಖಾನ್ ಹತ್ಯೆ ಪ್ರಕರಣದಲ್ಲಿಯ ಆರೋಪಿಗಳು ಬಿಡುಗಡೆಗೊಂಡಿದ್ದಾರೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಶುಕ್ರವಾರ ಆರೋಪಿಸಿದ್ದಾರೆ.

ಆಲ್ವಾರ್‌ನ ನ್ಯಾಯಾಲಯವು ಪೆಹ್ಲು ಖಾನ್ ಹತ್ಯೆ ಪ್ರಕರಣದ ಎಲ್ಲ ಆರು ಆರೋಪಿಗಳನ್ನು ಬುಧವಾರ ಖುಲಾಸೆಗೊಳಿಸಿತ್ತು.

‘ರಾಜಸ್ಥಾನ ಸರಕಾರದ ನಿರ್ಲಕ್ಷ ಮತ್ತು ನಿಷ್ಕ್ರಿಯತೆಯಿಂದಾಗಿ ಪ್ರಕರಣದಲ್ಲಿಯ ಎಲ್ಲ ಆರೋಪಿಗಳು ಬಿಡುಗಡೆಗೊಂಡಿರುವುದು ದುರದೃಷ್ಟಕರ. ಮೃತನ ಕುಟುಂಬಕ್ಕೆ ನ್ಯಾಯವನ್ನು ದೊರಕಿಸಲು ಸರಕಾರವು ಎಚ್ಚರಿಕೆ ವಹಿಸಿದ್ದರೆ ಇದು ಸಂಭವಿಸುತ್ತಿರಲಿಲ್ಲ ’ಎಂದು ಮಾಯಾವತಿ ಟ್ವೀಟಿಸಿದ್ದಾರೆ.

2017,ಎ.1ರಂದು ಹೈನುಗಾರಿಕೆಗೆಂದು ಗೋವುಗಳನ್ನು ಸಾಗಿಸುತ್ತಿದ್ದ ಪೆಹ್ಲು ಖಾನ್(55),ಅವರ ಇಬ್ಬರು ಪುತ್ರರು ಮತ್ತು ಇತರ ಕೆಲವರನ್ನು ಆಲ್ವಾರ್ ಸಮೀಪ ತಡೆದಿದ್ದ ಗುಂಪು ಅವರ ಮೇಲೆ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲು ಖಾನ್ ನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News