ಯುಪಿಸಿಎಲ್ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2019-08-16 15:25 GMT

ಉಡುಪಿ, ಆ.16: ಆರು ವರ್ಷಗಳ ಹಿಂದೆ ಸಾಲದ ಹಣಕ್ಕಾಗಿ ಎಲ್ಲೂರು ಯುಪಿಸಿಎಲ್ ಕಾರ್ಮಿಕರ ಶೆಡ್‌ನಲ್ಲಿ ಶರಣಪ್ಪ(43) ಎಂಬವರನ್ನು ಕೊಲೆ ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಪ್ಪ ದುರ್ಗಪ್ಪ ಮಸ್ತ್‌ಮಾರಡಿ ಯಾನೆ ಬಸು(45) ಶಿಕ್ಷೆಗೆ ಗುರಿಯಾದ ಆರೋಪಿ. ಇವರು ಯುಪಿಸಿಎಲ್ ನಲ್ಲಿ ಸೋಜಾ ಕನ್‌ಸ್ಟ್ರಕ್ಷನ್ ಗುತ್ತಿಗೆ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿಯ ಶರಣಪ್ಪ ಕೆಲ ಸಮಯಗಳ ಹಿಂದೆ ಬಸಪ್ಪನಿಂದ 500ರೂ. ಸಾಲ ಪಡೆದುಕೊಂಡಿದ್ದರು.

ಸಾಲದ ಹಣ ಮರುಪಾವತಿಸದ ವಿಚಾರದಲ್ಲಿ ಇವರಿಬ್ಬರ ಮಧ್ಯೆ ಆಗಾಗೆ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರದಲ್ಲಿ ಬಸಪ್ಪ ಇನ್ನೋರ್ವ ಆರೋಪಿ ಸಂಗಯ್ಯ ಎಂಬಾತನ ನೆರವು ಪಡೆದು 2013ರ ಆ.25ರಂದು ರಾತ್ರಿ 10:30ರ ಸುಮಾರಿಗೆ ಲೇಬರ್ ಕಾಲನಿಯ ಶೆಡ್‌ನಲ್ಲಿ ಮಲಗಿದ್ದ ಶರಣಪ್ಪರ ಎದೆ ಮತ್ತು ಮುಖಕ್ಕೆ ಕಲ್ಲನ್ನು ಹೊತ್ತು ಹಾಕಿ ಕೊಲೆ ಮಾಡಿದ್ದರು. ಬಳಿಕ ಶರಣಪ್ಪನಲ್ಲಿದ್ದ ಮೊಬೈಲ್ ಮತ್ತು 2000ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಕಲಂ 302 ಜೊತೆ 34 ಐಪಿಸಿಯಡಿ ಪ್ರಕರಣ ದಾಖಲಿಸಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಆಗಿನ ಕಾಪು ವೃತ್ತ ನಿರೀಕ್ಷಕ ಶಿವಾನಂದ ಎಸ್. ವಾಲಿಕರ್ ಆರೋಪಿಗಳನ್ನು ಬಂಧಿಸಿದ್ದು, ನಂತರ ಕಾಪು ವೃತ್ತ ನಿರೀಕ್ಷಕರಾಗಿ ಬಂದ ಸುನೀಲ್ ವೈ.ನಾಯ್ಕೆ 2013ರ ನ.25ರಂದು ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯ ಒಟ್ಟು 40 ಸಾಕ್ಷಿಗಳ ಪೈಕಿ 20 ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು.

ಈ ಮಧ್ಯೆ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದನು. ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟ ನ್ಯಾಯಾಧೀಶ ಸಿ.ಎಂ.ಜೋಶಿ ಆರೋಪಿಗೆ ಜೀವಿತಾವಧಿವರೆಗೆ ಜೈಲು ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದಿಸಿದ್ದರು.

ಇನ್ನೋರ್ವ ಆರೋಪಿ ಜೈಲಿನಲ್ಲೇ ಮೃತ್ಯು

ಕೊಲೆ ಪ್ರಕರಣದ ಇನ್ನೋರ್ವ ಆರೋಪಿ ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರ ನಿವಾಸಿ ಸಂಗಯ್ಯ ಯಾನೆ ಸಂಗಪ್ಪ ಚಂದ್ರಶೇಖರ್ ಶಿರೋಲ್ (40) ಬಂಧನಕ್ಕೆ ಒಳಗಾದ ಒಂದು ವರ್ಷದ ಬಳಿಕ ಜೈಲಿನಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದನು. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಚಾರಣೆ ಮಧ್ಯೆಯೇ ಆತ ಚಿಕಿತ್ಸೆ ಫಲಕಾರಿಯಾ ಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News