ಕೇಬಲ್ ಟಿವಿ ಪ್ರಸಾರಕರು, ಹಂಚಿಕೆದಾರರಿಂದ ದರಗಳಲ್ಲಿ ವಂಚನೆ: ಟ್ರಾಯ್

Update: 2019-08-16 15:40 GMT

ಹೊಸದಿಲ್ಲಿ, ಆ.16: ಟಿವಿ ವಾಹಿನಿಗಳ ಮಾರುಕಟ್ಟೆಯಲ್ಲಿರುವ ದರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಕೇಬಲ್ ಟಿವಿ ಪ್ರಸಾರಕರು ಮತ್ತು ಹಂಚಿಕೆದಾರರು (ಡಿಪಿಒ) ನೂತನವಾಗಿ ರಚಿಸಲಾಗಿರುವ ದರ ಪಟ್ಟಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಟ್ರಾಯ್ ಶುಕ್ರವಾರ ಆರೋಪಿಸಿದ್ದು, ದರ ಮತ್ತು ವಾಹಿನಿಗಳ ಆಯ್ಕೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಪರಿಹಾರಕ್ಕೆ ಗ್ರಾಹಕರ ಅಭಿಪ್ರಾಯ ಕೇಳಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) 2017ರ ಮಾರ್ಚ್‌ನಲ್ಲಿ ಪ್ರಸಾರ ಮತ್ತು ಕೇಬಲ್ ಸೇವೆಗಳಿಗೆ ನೂತನ ನಿಯಂತ್ರಕ ನಿಯಮಗಳನ್ನು ಸೂಚಿಸಿತ್ತು. ಈ ನಿಯಮಗಳು ಡಿಸೆಂಬರ್ 29, 2018ರಲ್ಲಿ ಜಾರಿಗೆ ಬಂದಿತ್ತು. ನೂತನ ನಿಯಮವು ಗ್ರಾಹಕರು ತಮಗೆ ಬೇಕಾದ ವಾಹಿನಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ವಿಶ್ಲೇಷಣೆಗಳ ಪ್ರಕಾರ, ನೂತನ ನಿಯಂತ್ರಕ ನಿಯಮಗಳು ಟಿವಿ ವಾಹಿನಿ ದರ ನಿಗದಿಯಲ್ಲಿ ಪಾರದರ್ಶಕತೆ ತಂದಿದೆ, ಈ ಕ್ಷೇತ್ರದಲ್ಲಿ ಉದ್ಯಮ ಪ್ರಕ್ರಿಯೆಯನ್ನು ಸೌಹಾರ್ದಯುತಗೊಳಿಸಿದೆ ಮತ್ತು ವಿತರಕರು ಹಾಗೂ ಗ್ರಾಹಕರ ನಡುವಿನ ವಿವಾದಗಳನ್ನು ಕಡಿಮೆ ಮಾಡಿದೆ.

ಆದರೆ ಗ್ರಾಹಕರಿಗೆ ಟಿವಿ ವಾಹಿನಿಗಳನ್ನು ಆಯ್ಕೆ ಮಾಡುವ ಸಾಕಷ್ಟು ಆಯ್ಕೆಯನ್ನು ನೀಡಿಲ್ಲ ಎಂದು ಟ್ರಾಯ್ ತಿಳಿಸಿದೆ. ಕೇಬಲ್ ಟಿವಿ ಪ್ರಸಾರಕರು ಮತ್ತು ವಿತರಕರು ತಮಗೆ ನೀಡಲಾದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರೇ ರಚಿಸಿರುವ ವಾಹಿನಿಗಳ ಗುಚ್ಛಕ್ಕೆ ಶೇ.70ರಷ್ಟು ದರ ವಿನಾಯಿತಿ ನೀಡುತ್ತಿದ್ದಾರೆ. ಆದರೆ ಹೀಗೆ ರಚಿಸಿರುವ ಎಲ್ಲ ವಾಹಿನಿಗಳ ಗುಚ್ಛಗಳು ಬಹುತೇಕ ಒಂದೇ ರೀತಿಯ ಚಾನೆಲ್‌ಗಳನ್ನು ಹೊಂದಿರುತ್ತವೆ. ಇದರಿಂದ ಗ್ರಾಹಕರು ಗೊಂದಲಕ್ಕೀಡಾಗಿ ಒತ್ತಡಕ್ಕೊಳಗಾಗಿ ಅನಗತ್ಯ ವಾಹಿನಿಗಳ ಗುಚ್ಛವನ್ನು ಖರೀದಿಸುತ್ತಾರೆ ಎಂದು ಟ್ರಾಯ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News