'ಸೂಕ್ತ ದಾಖಲೆಗಳಿಲ್ಲದೆ ವಾಹನ ಚಲಾವಣೆ ಶಿಕ್ಷಾರ್ಹ ಅಪರಾಧ'

Update: 2019-08-16 16:22 GMT

ಉಡುಪಿ, ಆ.16: ಯಾವುದೇ ವಯೋಮಾನದವರಾದರೂ ಸಹ ಸೂಕ್ತ ಅರ್ಹತೆ, ದಾಖಲೆಗಳಿಲ್ಲದೇ ವಾಹನ ಚಲಾಯಿಸಬೇಡಿ, ರಸ್ತೆಯಲ್ಲಿ ಯಾವ ಸಮಯದಲ್ಲಿ ಏನು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸೂಕ್ತ ದಾಖಲೆಗಳಿಲ್ಲದೇ ವಾಹನ ಚಲಾವಣೆ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಜಿಲ್ಲಾಡಳಿತ ವತಿಯಿಂದ ರಸ್ತೆ ಸುರಕ್ಷತೆಯ ಅರಿವಿಗಾಗಿ ಗುರುವಾರ ಸಂಜೆ ಆಯೋಜಿಸಿದ್ದ ಯಕ್ಷಗಾನ ‘ಯಮದಂಡ’ ಸಡಕ್ ಸುರಕ್ಷಾ-ಜೀವನ್ ರಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಡುಪಿ ನ್ಯಾಯಾಲಯದಲ್ಲಿ 800-900 ವಾಹನ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಸಮರ್ಪಕ ದಾಖಲೆಗಳಿಲ್ಲದೇ ವಾಹನ ಚಲಾವಣೆ ಶಿಕ್ಷಾರ್ಹ ಅಪರಾಧ ಮಾತ್ರವಲ್ಲದೇ, ಅಪಘಾತ ಸಂಭವಿಸಿ ಪ್ರಾಣ ಹಾನಿ ಮಾಡಿದರೆ, ಲಕ್ಷಾಂತರ ರೂ ಪರಿಹಾರ ನೀಡಬೇಕಾಗುತ್ತದೆ. ಪ್ರಸ್ತುತ ಮೋಟಾರು ವಾಹನ ಕಾಯಿದೆ ಪ್ರಬಲವಾಗಿದ್ದು, ಅದನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ರಸ್ತೆ ಸುರಕ್ಷಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಎಸ್ಪಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿ ಎಎಸ್ಪಿ ಕುಮಾರ ಚಂದ್ರ, ಕಾರ್ಕಳ ಎಎಸ್ಪಿ ಕೃಷ್ಣಕಾಂತ್, ಕುಂದಾಪುರ ಉಪ ವಿಬಾಗಾಧಿಕಾರಿ ಮಧುಕೇಶ್ವರ್, ಯಮದಂಡ ಯಕ್ಷಗಾನ ರಚಿಸಿದ ನಾಗೇಶ್ ಶಾನುಬೋಗ್, ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್‌ಓ ಉಪಸ್ಥಿತರಿದ್ದರು.

ನಂತರ ಕಲಾಪೀಠ ಕೋಟ ಇವರಿಂದ ‘ಯಮದಂಡ’ ಯಕ್ಷಗಾನ ಪ್ರದರ್ಶನಗೊಂಡಿತು. ಯಮ ಪಾತ್ರಧಾರಿಯಾಗಿ ಜಿಲ್ಲಾಧಿಕಾರಿ ಅವರ ಆಪ್ತ ಸಹಾಯಕ ಅಶ್ಪಾಕ್ ಅಭಿನಯಿಸಿ, ಎಲ್ಲರ ಪ್ರಂಶಸೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News