ಮಂಗಳೂರು: ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮುಂದುವರಿದ ಟ್ರಾಫಿಕ್ ಸಮಸ್ಯೆ

Update: 2019-08-16 16:47 GMT

ಮಂಗಳೂರು, ಆ.16: ಪೊಲೀಸ್ ಆಯುಕ್ತಾಲಯ ಮಟ್ಟದಲ್ಲಿ ಪ್ರತೀ ಶುಕ್ರವಾರ ಬೆಳಗ್ಗೆ 10ರಿಂದ 11ರ ಮಧ್ಯೆ ನಡೆಯುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಟ್ರಾಫಿಕ್ ಸಮಸ್ಯೆಯದ್ದೇ ಸದ್ದಾಗಿರುತ್ತದೆ. ಶುಕ್ರವಾರ ನಡೆದ 123ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ 21 ಫೋನ್ ಕರೆಗಳ ಪೈಕಿ ಹೆಚ್ಚಿನವರು ಟ್ರಾಫಿಕ್ ಸಮಸ್ಯೆಯದ್ದೇ ಆಗಿತ್ತು. ಇದರಿಂದ ಇತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೆಚ್ಚಿನವರಿಗೆ ಕಾಲಾವಕಾಶ ಸಿಗುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಡಾ.ಪಿ.ಎಸ್.ಹರ್ಷ ತಿಂಗಳಲ್ಲಿ ಒಂದು ಶುಕ್ರವಾರ ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ಹಾಗು ಅವರ ಅಹವಾಲು ಆಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಶಾಲಾ ಆವರಣದಲ್ಲಿ ಮಕ್ಕಳಿಗೆ ರಸ್ತೆ ದಾಟಲು, ಬಸ್ ಮತ್ತಿತರ ವಾಹನಗಳನ್ನು ಹತ್ತಲು ಅನುಕೂಲವಾಗುವಂತೆ ಟ್ರಾಫಿಕ್ ವಾಲಂಟೀರ್ (ಸಂಚಾರ ಸ್ವಯಂ ಸೇವಕರು) ಗಳನ್ನು ನೇಮಕ ಮಾಡಲು ಉದ್ದೇಶಿಸಿದ್ದು, ಈ ಬಗ್ಗೆ ಶೀಘ್ರ ಸಂಬಂಧ ಪಟ್ಟವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿ ಬಂದ ಪ್ರಶ್ನೆಗಳಿಗ ಪ್ರತಿಕ್ರಿಯಿಸಿದರು.

ಈಗಾಗಲೇ ಇರುವ ಟ್ರಾಫಿಕ್ ವಾರ್ಡನ್ ಮಾದರಿಯಲ್ಲಿ ಟ್ರಾಫಿಕ್ ವಾಲಂಟೀರ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಶಾಲಾ ಸಮಿತಿಯವರು ಮತ್ತು ನಾಗರೀಕರು ಇದಕ್ಕೆ ಸಹಕರಿಸಬೇಕು. ವಾಲಂಟೀರ್ (ಸ್ವಯಂ ಸೇವಕ) ಆಗಿ ಸೇವೆ ಸಲ್ಲಿಸಲು ಸಾರ್ವಜನಿಕರು ಮುಂದೆ ಬರ ಬೇಕು ಎಂದು ಅವರು ಮನವಿ ಮಾಡಿದರು.

ಕೊಟ್ಟಾರ ಚೌಕಿಯ ಸುಬ್ರಹ್ಮಣ್ಯಪುರದಲ್ಲಿ ನೋ ಪಾರ್ಕಿಂಗ್ ಲಕ ಹಾಗೂ ಬಸ್ ತಂಗುದಾಣಕ್ಕೆ ಶೆಲ್ಟರ್ ನಿರ್ಮಿಸಬೇಕು ಎಂದು ನಾಗರಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು, ನೋ ಪಾರ್ಕಿಂಗ್ ಬೋರ್ಡ್ ಹಾಕಲು ಕ್ರಮ ವಹಿಸಲಾಗುವುದು ಎಂದರು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಸ್ ಶೆಲ್ಟರ್ ಮತ್ತು ಇತರ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ಹೇಳಿದರು.

ಮೂಡುಬಿದಿರೆಯ ಮಸೀದಿಯ ಎದುರು ಅನಧಿಕೃತವಾಗಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಸ್ಥಳೀಯ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾ ಗುವುದು ಎಂದು ಆಯುಕ್ತರು ತಿಳಿಸಿದರು.

ಉಳ್ಳಾಲ- ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುವ ಸಿಟಿ ಬಸ್‌ಗಳಿಗೆ ಸಮಯ ಪಾಲನೆ ಇಲ್ಲದೆ ಪೈಪೋಟಿಯಿಂದ ಬಸ್ಸುಗಳನ್ನು ಓಡಿಸಲಾಗುತ್ತಿದೆ ಎಂದು ಪ್ರಯಾಣಿಕರೊಬ್ಬರು ದೂರಿದರು. ಈ ಬಗ್ಗೆ ಬಸ್ ಮಾಲಕರ ಸಂಘದ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು. ಈ ಬಗ್ಗೆ ಶೀಘ್ರದಲ್ಲಿಯೇ ಟೈಮ್ ಕೀಪರ್‌ಗಳನ್ನು ನೇಮಕ ಮಾಡಲಾಗುವುದು ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದರು.

ಕುಳಾಯಿ ಹೊನ್ನಕಟ್ಟೆ ಜಂಕ್ಷನ್, ಬೈಕಂಪಾಡಿಯ ಜೋಕಟ್ಟೆ ಕ್ರಾಸ್ ಬಳಿ, ಮಂಗಳೂರಿನ ಗಣಪತಿ ಹೈಸ್ಕೂಲ್ ರೋಡ್ (ವಿಮಲೇಶ್ ಹೊಟೇಲ್ ಎದುರು) ಮತ್ತಿತರ ಕಡೆ ರಸ್ತೆಯಲ್ಲಿ ಗುಂಡಿ ನಿರ್ಮಾಣ ಆಗಿ ವಾಹನ ಸಂಚಾರ ಕಷ್ಟವಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದವು. ಈ ಬಗ್ಗೆ ಮಹಾನಗರ ಪಾಲಿಕೆಯ ಅಯುಕ್ತರಿಗೆ ಪತ್ರ ಬರೆದು ರಸ್ತೆ ದುರಸ್ತಿಗೆ ಮನವಿ ಮಾಡಲಾಗುವುದು ಎಂದು ಡಾ ಪಿ.ಎಸ್. ಹರ್ಷ ತಿಳಿಸಿದರು.

ಕ್ಯಾಬ್ ಚಾಲಕ/ಮಾಲಕರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಓಲಾ ವಾಹನದ ಚಾಲಕರೊಬ್ಬರು ದೂರಿಕೊಂಡರು. ಈ ಬಗ್ಗೆ ಓಲಾ ಮತ್ತು ಕ್ಯಾಬ್ ಚಾಲಕ/ಮಾಲಕರನ್ನು ಕರೆಸಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಹೊಟೇಲ್‌ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಇಲ್ಲ. ಕೆಲವು ಹೊಟೇಲ್‌ಗಳಲ್ಲಿ ವಾಸ್ತವ್ಯಕ್ಕೆ ನೀಡಲಾಗುವ ಕೊಠಡಿಗಳಲ್ಲಿ ಸ್ವಚ್ಛತೆ ಇಲ್ಲ. ಮಲೇರಿಯಾ, ಡೆಂಗ್ ಕಾಯಿಲೆ ಸೋಂಕುವ ಭೀತಿ ಇದೆ ಎಂದು ಕಾರ್ಮಿಕರೊಬ್ಬರು ದೂರು ನೀಡಿದರು.

ಈ ಬಗ್ಗೆ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಸ್ಥಾಯೀ ಸಮಿತಿಯ ಗಮನಕ್ಕೆ ತರಲಾಗುವುದು. ಅಲ್ಲದೆ ಜಿಲ್ಲಾಧಿಕಾರಿ, ಪೊಲೀಸ್, ಜಿಪಂ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಆಗಾಗ ಹೊಟೇಲ್‌ಗಳಲ್ಲಿ ತಪಾಸಣೆ ನಡೆಸಲಾಗುವುದು ಎಂದು ಡಾ.ಪಿ.ಎಸ್. ಹರ್ಷ ವಿವರಿಸಿದರು. ನಗರದಲ್ಲಿ ಭಿಕ್ಷುಕರ ಹಾವಳಿ ಹಾಗೂ ಫುಟ್‌ಪಾತ್‌ನಲ್ಲಿ ಗಲೀಜು ಮಾಡುತ್ತಿರುವ ಬಗ್ಗೆ ಹಲವು ಜನರಿಂದ ದೂರುಗಳು ಬಂದವು. ಭಿಕ್ಷುಕರನ್ನು ಹಿಡಿದು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಪೊಲೀಸ್ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಲೈಸನ್ಸ್ ಇಲ್ಲದೆ ಹಾಗೂ ಸೈಲೆನ್ಸರ್ ಮುರಿದು ವಾಹನಗಳನ್ನು ಚಲಾಯಿಸಿ ನಿಯಮ ಉಲ್ಲಂಘನೆ ಹಾಗೂ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಕುರಿತಂತೆ ನಾಗರಿಕರು ದೂರಿದರು. ಮೋಟಾರು ವಾಹನ ನಿಯಮ ಉಲ್ಲಂಘನೆ ಬಗ್ಗೆ ಟ್ರಾಫಿಕ್ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಶಬ್ದ ಮಾಲಿನ್ಯದ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಾ. ಹರ್ಷ ತಿಳಿಸಿದರು.

ನೋ ಪಾರ್ಕಿಂಗ್ ಜಾಗದಲ್ಲಿ ಮಾಧ್ಯಮದವರು ವಾಹನ ನಿಲುಗಡೆ ಮಾಡುತ್ತಿರುವುದು ಸರಿಯೇ ಎಂದು ನಾಗರಿಕರೊಬ್ಬರು ಪ್ರಶ್ನಿಸಿದರು. ಕಾನೂನಿಗೆ ಎಲ್ಲರೂ ಸಮಾನರು. ಮಾಧ್ಯಮದವರಾಗಲಿ, ಪೊಲೀಸರಾಗಲಿ, ಮೋೀಟಾರು ವಾಹನ ಕಾಯ್ದೆ ಉಲ್ಲಂಸುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಹರ್ಷ ಹೇಳಿದರು.

ಕಾರ್ಯಕ್ರಮದಲ್ಲಿ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀ ಗಣೇಶ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವಿನಯ್ ಎ. ಗಾಂವ್‌ಕರ್, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಮೋಹನ್ ಕೊಟ್ಟಾರಿ, ಗುರುದತ್ತ ಕಾಮತ್, ಎಎಸ್ಸೈ ಯುವರಾಜ್, ಎಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News