ಆ.18: ಎಸೆಸ್ಸೆಫ್ ಬ್ಲಡ್ ಸೈಬೊದ 100ನೆ ರಕ್ತದಾನ ಶಿಬಿರ

Update: 2019-08-16 17:05 GMT

ಮಂಗಳೂರು, ಆ.16: ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ ಅಧೀನದಲ್ಲಿ 100ನೇ ರಕ್ತದಾನ ಶಿಬಿರವು ಆ.18ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ತಿಳಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಎರಡು ದಶಕದೀಂಚೆಗೆ ತುರ್ತು ಸಂದರ್ಭ ಹಾಗೂ ಇತರ ವೇಳೆಯಲ್ಲಿ ರಕ್ತದಾನ ಮಾಡುವ ಮೂಲಕ ಅಗತ್ಯವಿರುವವರಿಗೆ ಸಕಾಲಕ್ಕೆ ನೆರವು ನೀಡುವ ಕೆಲಸ ಮಾಡುತ್ತಿದೆ. ಕಳೆದ 2 ವರ್ಷಗಳಲ್ಲಿ ಯಶಸ್ವಿಯಾಗಿ 99 ಕ್ಯಾಂಪ್ ಪೂರೈಸಿದೆ. ಈ ಅವಧಿಯಲ್ಲಿ 7,103 ಯುನಿಟ್ ರಕ್ತವನ್ನು ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೂ ದಾನ ಮಾಡಿದೆ. ಇದೀಗ 100ನೇ ಕಾರ್ಯಕ್ರಮವನ್ನು 5 ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಸುಮಾರು 500ರಷ್ಟು ಮಂದಿ ರಕ್ತದಾನ ಮಾಡುವ ಮೂಲಕ ಆಚರಿಸಲಾಗುವುದು ಎಂದರು.

ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಸಿಟಿಎಂ ತಂಙಳ್ ದುಆಗೈಯುವರು. ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಸಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್‌ಕೆಎಂ ಶಾಫಿ ಸಅದಿ ಸಂದೇಶ ನೀಡಲಿದ್ದಾರೆ. ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಸೌಹಾರ್ದತಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಶಾಸಕರಾದ ಯು.ಟಿ.ಖಾದರ್, ವೇದವ್ಯಾಸ್ ಕಾಮತ್, ಡಾ.ಯು.ಟಿ. ಇಫ್ತಿಕಾರ್ ಅಲಿ, ಮಾಜಿ ಮೇಯರ್ ಭಾಸ್ಕರ್ ಮೊಲಿ, ರೆಡ್‌ಕ್ರಾಸ್ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ಮಾಜಿ ಸಚಿವ ರಮನಾಥ ರೈ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ವಗ್ಗ, ತೌಸೀಫ್ ಸಅದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News