ನೆರೆ ಸಂದರ್ಭ ಕಾರ್ಯನಿರ್ವಹಣೆ: ಪತ್ರಕರ್ತರ ಸಂಘದಿಂದ ಡಿಸಿಗೆ ಅಭಿನಂದನೆ

Update: 2019-08-16 17:10 GMT

ಮಂಗಳೂರು, ಆ.16: ದ.ಕ. ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿ ಹಗಲು ರಾತ್ರಿ ಎನ್ನದೆ ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಶಿಕಾಂತ ಸೆಂಥಿಲ್ ಅವರನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಅಭಿನಂದಿಸಲಾಯಿತು.

ಪ್ರವಾಹದಿಂದ ಬೆಳ್ತಂಗಡಿ ತಾಲೂಕಿನ ಅನೇಕ ಗ್ರಾಮಗಳಿಗೆ ಭಾರಿ ಹಾನಿಯಾಗಿದೆ. ನೂರಾರು ಮಂದಿ ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸತತ ಒಂದು ವಾರಗಳ ಕಾಲ ಈ ಪ್ರದೇಶದ ಉಸ್ತುವಾರಿ ವಹಿಸಿಕೊಂಡು ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಸಮಗ್ರ ಪರಿಹಾರ ಕಾರ್ಯ ನಡೆಸಿದ್ದರು. ಅಲ್ಲದೆ ಸಂತ್ರಸ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಕೆಲಸವನ್ನು ಮಾಡಿದ್ದನ್ನು ಸಂಘದ ನಿಯೋಗ ಶ್ಲಾಘಿಸಿತು.

ಈ ಬಾರಿ ಮಳೆಗಾಲಕ್ಕೆ ಮುನ್ನವೇ ಪ್ರಾಕೃತಿಕ ವಿಕೋಪದಿಂದ ಎದುರಾಗಬಹುದಾದ ಸಮಸ್ಯೆಗಳ ಅಪಾಯದ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಜೂನ್‌ನಲ್ಲಿ ಮಂಗಳೂರಿಗೆ ಆಗಮಿಸಿತ್ತು. 10 ಬೋಟ್‌ಗಳನ್ನೂ ಕೂಡಾ ಸಿದ್ಧಪಡಿಸಲಾಗಿತ್ತು. ಹೀಗಾಗಿ ಭಾರಿ ಪ್ರಮಾಣದ ನೆರೆ ಬಂದರೂ ಹೆಚ್ಚಿನ ಸಾವು ನೋವುಗಳು ಆಗದಂತೆ ಕ್ರಮ ಕೈಗೊಳ್ಳಲು ಸಹಾಯಕವಾಯಿತು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಪತ್ರಕರ್ತ ರಾಜೇಶ್ ಮನೆಗೆ ಹಾನಿ, ಪರಿಹಾರಕ್ಕೆ ಮನವಿ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಟಿವಿ 9 ವೀಡಿಯೊ ಜರ್ನಲಿಸ್ಟ್ ರಾಜೇಶ್ ಅವರ ಮನೆಗೆ ಪ್ರವಾಹದಲ್ಲಿ ತೀವ್ರ ಹಾನಿ ಉಂಟಾಗಿದ್ದು ಅವರ ಮನೆ ವಾಸಕ್ಕೆ ಅಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ 5 ಲಕ್ಷ ರೂ. ಪರಿಹಾರ ನೀಡುವಂತೆ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಸಿ.ಭಟ್, ಭಾಸ್ಕರ್ ರೈ ಕಟ್ಟ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News