ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ

Update: 2019-08-16 17:13 GMT

ಮಂಗಳೂರು, ಆ.16: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ನಂದಿನಿ ಫ್ಲೆಕ್ಸಿ ಪ್ಯಾಕ್ 9000 ಲೀಟರ್ ತೃಪ್ತಿ ಹಾಲು (90 ದಿನಗಳ ದೀರ್ಘ ಬಾಳಿಕೆಯ 180 ಮಿ.ಲೀ.ನ 50,000 ಪ್ಯಾಕೆಟ್) ಹಾಗೂ 650 ಸಂಖ್ಯೆ ಬೆಡ್‌ಶಿಟ್‌ಗಳನ್ನು ಉತ್ತರ ಭಾಗದ ನೆರೆಪೀಡಿತ ಪ್ರದೇಶದ ಅಥಣಿ ಮತ್ತು ಜಮಖಂಡಿ ಭಾಗದ ನೆರೆ ಸಂತ್ರಸ್ತರಿಗೆ ವಿತರಿಸಲು ಹೊರಟ ವಾಹನಕ್ಕೆ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಹೆಗ್ಡೆ ಮಾತನಾಡಿ, ಸುಮಾರು 5.12 ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ವಿತರಿಸಲು ಮಾರುಕಟ್ಟೆ ಅಧಿಕಾರಿಗಳಾದ ಸಚಿನ್ ಸಿ. ಮತ್ತು ಧನುಷ್ ಕುಮಾರ್ ಎಚ್.ಎಲ್. ಅವರನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ, ಜಿಲ್ಲಾ ವ್ಯಾಪ್ತಿಯ ಸಾಕಷ್ಟು ರೈತರು ಹಾಗೂ ಹೈನುಗಾರರು ತಮ್ಮ ಜಾನುವಾರು, ಮನೆ-ಮಠ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅವರಿಗೂ ಆರ್ಥಿಕ ಸಹಾಯಹಸ್ತ ನೀಡುವ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಗಳೊಂದಿಗೆ ಮನವಿ ಮಾಡಲಾಗಿದೆ. ಒಕ್ಕೂಟದ ಉದ್ಯೋಗಿಗಳ ವಂತಿಗೆಯನ್ನು ಕ್ರೋಡೀಕರಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭ ಪ್ರಧಾನ ವ್ಯವಸ್ಥಾಪಕ ಜಿ.ಎ. ರಾಯ್ಕರ್, ವ್ಯವಸ್ಥಾಪಕ ಜಯದೇವಪ್ಪ ಕೆ., ಪ್ರಭಾರ ವ್ಯವಸ್ಥಾಪಕ ಹೇಮಂತ್‌ ಕುಮಾರ್, ಸಹಾಯಕ ವ್ಯವಸ್ಥಾಪಕರಾದ ಸೀನಪ್ಪ ವಿ., ಅನಿಲ್ ಕುಮಾರ್, ಮಾರುಕಟ್ಟೆ ಅಧಿಕಾರಿ ಎಂ.ರವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News