ದ್ವಿಚಕ್ರ ವಾಹನ ಸವಾರನ ಕತ್ತು ಸೀಳಿದ ಚೀನಿ ಗಾಳಿಪಟ ದಾರ

Update: 2019-08-17 03:56 GMT

ಹೊಸದಿಲ್ಲಿ: ಚೀನಿ ನಿರ್ಮಿತ ಗಾಳಿಪಟದ ಗಾಜುಲೇಪಿತ ದಾರ, ದ್ವಿಚಕ್ರ ವಾಹನ ಸವಾರ ಸಿವಿಲ್ ಎಂಜಿನಿಯರ್ ಒಬ್ಬರ ಕತ್ತು ಸೀಳಿ ಆತನ ಸಾವಿಗೆ ಕಾರಣವಾದ ವಿಚಿತ್ರ ಘಟನೆ ದೆಹಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿ ನಡೆದಿದೆ.

ಗುರುವಾರ ರಕ್ಷಾಬಂಧನ ಆಚರಿಸಿದ ಬಳಿಕ ಮಾನವ ಶರ್ಮಾ (28) ಮತ್ತು ಅವರ ಇಬ್ಬರು ತಂಗಿಯರು ಹರಿನಗರದಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪಶ್ಚಿಮ ವಿಹಾರ ಮೇಲ್ಸೇತುವೆಯಲ್ಲಿ ಹೋಗುತ್ತಿದ್ದಾಗ ಗಾಳಿಪಟವೊಂದರ ದಾರ ಮಾನವ ಶರ್ಮಾ ಅವರ ಕತ್ತಿಗೆ ಸುತ್ತಿಕೊಂಡು ನೋಡನೋಡುತ್ತಿದ್ದಂತೆ ಕತ್ತು ಸೀಳಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯದ ಸ್ವರೂಪ ಎಷ್ಟು ತೀವ್ರವಾಗಿತ್ತು ಎಂದರೆ ವ್ಯಕ್ತಿಯ ವಾಯುನಾಳ ಕೂಡಾ ತುಂಡಾಗಿ ಆತ ಸ್ಕೂಟರ್‌ನಿಂದ ಬಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾನವ ಶರ್ಮಾ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇಬ್ಬರು ತಂಗಿಯಂದಿರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುದ್ಧವಿಹಾರದ ನಿವಾಸಿಯಾಗಿದ್ದ ಇವರು ನಿರ್ಮಾಣ ಸಂಸ್ಥೆಯೊಂದರಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ದೆಹಲಿಯಲ್ಲಿ ಇಂಥ ಚೀನಿದಾರದಿಂದಾಗಿ ಗುರುವಾರ ಎಂಟು ಮಂದಿ ಗಾಯಗೊಂಡಿದ್ದಾರೆ. ಇಂಥ 15 ಪ್ರಕರಣಗಳು ವರದಿಯಾಗಿವೆ. ಏಳು ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ದೇಶವ್ಯಾಪಿ ಚೀನಿದಾರ ಮತ್ತು ಇತರ ಅಪಾಯಕಾರಿ ಗಾಳಿಪಟ ದಾರದ ಖರೀದಿ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News