ಸೊರ್ನಾಡ್ ವಿಶ್ವನಾಥ ಶೆಟ್ಟಿಗೆ ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿ

Update: 2019-08-17 15:42 GMT

ಮಂಗಳೂರು, ಆ.17: ಜಾಗತಿಕ ಬಂಟ ಪ್ರತಿಷ್ಠಾನವು ಪ್ರತಿವರ್ಷ ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ಯಕ್ಷಗಾನದ ಹಿರಿಯ ಕಲಾವಿದರಿಗೆ ನೀಡುವ ಪ್ರಶಸ್ತಿಗೆ 2018-19ನೇ ಸಾಲಿನಲ್ಲಿ ಸೊರ್ನಾಡು ವಿಶ್ವನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಪಳ್ಳಿ ಕಿಶನ್ ಹೆಗ್ಡೆ ಮತ್ತು ವಿಶ್ರಾಂತ ಪ್ರಾಚಾರ್ಯ ಪ್ರೊ.ಜಿ.ಆರ್.ರೈ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿಗೆ ಪರಿಗಣಿಸಿದೆ
 ಎಳವೆಯಲ್ಲೇ ಯಕ್ಷಗಾನಾಸಕ್ತಿ ಹೊಂದಿದ್ದ ವಿಶ್ವನಾಥ ಶೆಟ್ಟಿ ಎಂಕು ಭಾಗವತರಿಂದ ಚೆಂಡೆ-ಮದ್ದಳೆ, ಮೂಡುಬಿದಿರೆ ವಾಸು ಅವರಿಂದ ಯಕ್ಷಗಾನದ ಕುಣಿತ, ಕೂರ್ಯಾಳ ತಮ್ಮಯ್ಯ ಆಚಾರ್ಯ ಮತ್ತು ನಾಂಞ ಕಿಲ್ಲೆಯವರಿಂದ ಅರ್ಥಗಾರಿಕೆ ಹಾಗೂ ರಾಜನ್ ಅಯ್ಯರ್‌ರಿಂದ ತಾಂಡವ ನೃತ್ಯವನ್ನು ಅಭ್ಯಸಿಸಿದ್ದಾರೆ. ಸೊರ್ನಾಡು ಶ್ರೀದುರ್ಗಾಪರಮೇಶ್ವರಿ ಮೇಳವನ್ನು ಕಟ್ಟಿ ಯಕ್ಷಗಾನ ಬಯಲಾಟಗಳನ್ನು ನಡೆಸಿಕೊಂಡು ಬಂದ ಇವರ ಯಕ್ಷಗಾನ ಸೇವೆಯನ್ನು ಪರಿಗಣಿಸಿ ಜಾಗತಿಕ ಬಂಟ ಪ್ರತಿಷ್ಠಾನವು ಪ್ರಶಸ್ತಿಗೆ ಆಯ್ಕೆ ಮಾಡಿದೆ.

2019ರ ಆ.25ರಂದು ನಗರದ ಐಎಂಎ ಸಭಾಂಗಣದಲ್ಲಿ ಜರಗುವ ಮಾಹೆ ಉಪಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಬಿ. ಸಚ್ಚಿದಾನಂದ ಶೆಟ್ಟಿ ಅವರು ಸೊರ್ನಾಡು ವಿಶ್ವನಾಥ ಶೆಟ್ಟರಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಎಂ.ಶೆಟ್ಟಿ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News