ಕುಂದಾಪುರ ಮಿನಿವಿಧಾನ ಸೌಧದ ಸ್ಲ್ಯಾಬ್ ಗಾರೆ ಕುಸಿತ: ಕರ್ತವ್ಯ ನಿರತ ಸಿಬ್ಬಂದಿಗೆ ಗಾಯ

Update: 2019-08-17 16:22 GMT

ಕುಂದಾಪುರ, ಆ.17: ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಕುಂದಾಪುರದ ಮಿನಿವಿಧಾನ ಸೌಧದ ಮೇಲಂತಸ್ತಿನ ಕಂದಾಯ ವಿಭಾಗದ ಕೋಣೆಯ ಸ್ಲ್ಯಾಬ್ ಕಳಪೆ ಕಾಮಗಾರಿಯಿಂದಾಗಿ ಶನಿವಾರ ಮಧ್ಯಾಹ್ನ ವೇಳೆ ಕುಸಿದು ಬಿದ್ದಿದ್ದು, ಇದರಿಂದ ಕರ್ತವ್ಯ ನಿರತ ಸಿಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಗಾಯಗೊಂಡಿರುವ ಕಂದಾಯ ವಿಭಾಗದ ಸಿಬ್ಬಂದಿ ನಾರಾಯಣ ಬಿಲ್ಲವ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಘಡದಿಂದ ಕಚೇರಿಯೊಳಗಿದ್ದ ಮೂರು ಕಂಪ್ಯೂಟರ್, ಒಂದು ಫ್ಯಾನ್, ಕುರ್ಚಿಗಳು, ಕಡತಗಳು ಹಾಗೂ ಇತರೆ ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಗೆ ಹೊಂದಿಕೊಂಡಿರುವ ಕಂದಾಯ ವಿಭಾಗದ ಕಚೇರಿಯ ಮೇಲ್ಛಾವಣಿಯ ಸ್ಲ್ಯಾಬ್‌ನ ಗಾರೆ ಏಕಾಏಕಿ ಕುಸಿದು ಬಿತ್ತೆನ್ನಲಾಗಿದೆ. ಇದೇ ವೇಳೆ ಅದರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಬಿಲ್ಲವ ಮೇಲೆ ಬಿದ್ದಿದೆ. ಫ್ಯಾನ್‌ನಿಂದಾಗಿ ಸ್ಲಾಬ್ ನಾರಾಯಣರ ತಲೆಗೆ ಬೀಳುವುದು ತಪ್ಪಿದೆ. ಅವರ ಕೈಗೆ ಗಾಯವಾಗಿರುವ ಬಗ್ಗೆ ತಿಳಿದು ಬಂದಿದೆ.

ಕಳಪೆ ಕಾಮಗಾರಿಯ ಪರಿಣಾಮವಾಗಿ ಸ್ಲಾಬ್‌ನ ಗಾರೆ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ. ಅಲ್ಲದೆ ಕೊಠಡಿಯ ಗೋಡೆ ಕೂಡ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಈ ಕೊಠಡಿಯಲ್ಲಿ ಒಟ್ಟು 12 ಮಂದಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇವರೆಲ್ಲ ಈ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಉದ್ಘಾಟನೆಗೆ ಮೊದಲೇ ಕಳಪೆ ಕಾಮಗಾರಿ ಆರೋಪ

ಉದ್ಘಾಟನೆಗೆ ಮೊದಲೆ ಮಿನಿ ವಿಧಾನಸೌಧ ಕಟ್ಟಡದ ಕಳಪೆ ಕಾಮಗಾರಿ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. 2015 ಫೆ.7ರಂದು ಅಂದಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಈ ಕಟ್ಟಡವನ್ನು ಉದ್ಘಾಟಿಸಿದ್ದರು.

ಸುಮಾರು ನಾಲ್ಕೂವರೆ ವರ್ಷದ ಹಿಂದೆ ನಿರ್ಮಾಣವಾಗಿದ್ದ ಮಿನಿ ವಿಧಾನ ಸೌಧದಲ್ಲಿ ಕಳೆದ ವರ್ಷ ಮೊದಲ ಮಹಡಿ ಪ್ರವೇಶ ದ್ವಾರದ ಬಳಿ ಸ್ಲ್ಯಾಬ್‌ನ ಸಿಮೆಂಟ್ ಗಾರೆ ಕುಸಿದಿತ್ತು. ಇಲ್ಲಿನ ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಈವರೆಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಈ ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂಬ ಆಗ್ರಹ ಹಲವು ವರ್ಷಗಳಿಂದ ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News