ಆ.23ಕ್ಕೆ ಅಶೋಕ್‌ರಾಜ್ ಬಳಗದಿಂದ ‘ಹುಲಿವೇಷ ಸ್ಪರ್ಧೆ’

Update: 2019-08-17 16:24 GMT

ಉಡುಪಿ, ಆ.17: ಕಳೆದ 24 ವರ್ಷಗಳಿಂದ ಸತತವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹುಲಿವೇಷ ಹಾಕಿ ನಗರದಲ್ಲಿ ಮನೆ ಮಾತಾಗಿರುವ ಕಾಡಬೆಟ್ಟಿನ ಅಶೋಕ್‌ರಾಜ್ ಮತ್ತು ಬಳಗ, ತನ್ನ ಬೆಳ್ಳಿಹಬ್ಬದ ಸಂಭ್ರಮದಂಗವಾಗಿ ಆ.23ರ ಶುಕ್ರವಾರ ರಾಜ್ಯ ಮಟ್ಟದ ಹುಲಿ ವೇಷ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಬಳಗದ ಅಧ್ಯಕ್ಷ ಅಶೋಕ್‌ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆ ಅಪರಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ನಡೆಯಲಿದೆ ಎಂದರು. ಹೊರಜಿಲ್ಲೆಗಳ ಹಲವು ಪ್ರಮುಖ ತಂಡಗಳು ಸೇರಿದಂತೆ ಒಟ್ಟು 12-13 ತಂಡಗಳಿಗೆ ಸೀಮಿತವಾಗಿ ಈ ಸ್ಪರ್ಧೆ ನಡೆಯಲಿದೆ ಎಂದರು.

ಸ್ಪರ್ಧೆಯ ವಿಜೇತರಿಗೆ ಮೊದಲ ಬಹುಮಾನ 30,333ರೂ, ದ್ವಿತೀಯ 20,222 ಹಾಗೂ ತೃತೀಯ ಬಹುಮಾನ 10,111ರೂ. ನೀಡಲಾಗುವುದು. ಉತ್ತಮ ತಂಡವೂ ಸೇರಿದಂತೆ ಮೂರು ಪ್ರೋತ್ಸಾಹಕ ಬಹುಮಾನಗಳೂ ಇದ್ದು, ಮೂರು ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುವುದು ಎಂದು ಅವರು ನುಡಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೆ ಗರಿಷ್ಠ 20 ನಿಮಿಷಗಳ ಪ್ರದರ್ಶನಕ್ಕೆ ಅವಕಾಶವಿದೆ. ತಂಡದಲ್ಲಿ ಕನಿಷ್ಠ 15 ಮಂದಿ ಇರಬೇಕಾಗುತ್ತದೆ. ಕನಿಷ್ಠ ಮೂರು ಸಾಂಪ್ರದಾಯಿಕ ಹುಲಿವೇಷಗಳಿರಬೇಕು ಎಂದರು.

ಅಶೋಕ್‌ರಾಜ್ ಬಳಗ 1995ರಿಂದ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಹುಲಿವೇಷ ಹಾಕುತಿದ್ದು, ನಿರಂತರವಾಗಿ ಪ್ರದರ್ಶನ ನೀಡುತಿದ್ದೇವೆ. ಅಲ್ಲದೇ ಹೊರ ಜಿಲ್ಲೆ, ಹೊರರಾಜ್ಯಗಳಲ್ಲೂ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಜಯಿಸಿದ್ದು, ನೂರಾರು ಪ್ರದರ್ಶನಗಳನ್ನು ನೀಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಿಶೋರ್‌ರಾಜ್ ಕಾಡಬೆಟ್ಟು, ವಿನೋದ್ ಶೇರಿಗಾರ್ ಗುಂಡಿಬೈಲು, ಭಗವಾನ್‌ದಾಸ್ ಹಾಗೂ ಗಣೇಶರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News