ಐಎಲ್ ಆ್ಯಂಡ್ ಎಫ್‌ಎಸ್ ಪ್ರಕರಣದಲ್ಲಿ ಮೊದಲ ಆರೋಪ ಪಟ್ಟಿ ಸಲ್ಲಿಕೆ, 570 ಕೋ.ರೂ.ಆಸ್ತಿ ಜಪ್ತಿ

Update: 2019-08-17 17:09 GMT

ಹೊಸದಿಲ್ಲಿ, ಆ.17: ಐಎಲ್ ಆ್ಯಂಡ್ ಎಫ್‌ಎಸ್‌ನ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ತನ್ನ ಮೊದಲ ಆರೋಪ ಪಟ್ಟಿಯನ್ನು ಸಲ್ಲಿಸಿರುವ ಜಾರಿ ನಿರ್ದೇಶನಾಲಯ(ಈ.ಡಿ.)ವು,ಕಂಪನಿಗೆ ಸೇರಿದ 570 ಕೋ.ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದರು.

ಕಂಪನಿಗೆ ಆರ್ಥಿಕ ಬಿಕ್ಕಟ್ಟನ್ನುಂಟು ಮಾಡುವಲ್ಲಿ ನಿರ್ದೇಶಕರು ಮತ್ತು ಇತರರ ಪಾತ್ರಗಳನ್ನು ವಿವರಿಸಿರುವ ಆರೋಪ ಪಟ್ಟಿಯು,ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಹಣಕಾಸು ಅವ್ಯವಹಾರಗಳಿಗೆ ಕಾರಣವಾಗಿತ್ತು ಎಂದು ಆರೋಪಿಸಿದೆ.

ಪಿಎಂಎಲ್‌ಎ ಅಡಿ ಆಸ್ತಿಗಳ ಜಪ್ತಿಗಾಗಿ ತಾತ್ಕಾಲಿಕ ಆದೇಶವನ್ನು ಹೊರಡಿಸಿದ ಈ.ಡಿ. ಕಂಪನಿಯ ಬ್ಯಾಂಕ್ ಖಾತೆಗಳು ಮತ್ತು ದಿಲ್ಲಿ,ಮುಂಬೈ,ಚೆನ್ನೈ ಮತ್ತು ಬೆಲ್ಜಿಯಮ್‌ನ ಬ್ರಸೆಲ್ಸ್‌ನಲ್ಲಿರುವ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ.

ಈ ವಾಣಿಜ್ಯಿಕ ಮತ್ತು ವಸತಿ ಸ್ಥಿರಾಸ್ತಿಗಳು ಐಎಲ್ ಆ್ಯಂಡ್ ಎಫ್‌ಎಸ್ ಫೈನಾನ್ಶಿಯಲ್ ಸರ್ವಿಸಿಸ್ ಲಿ. (ಐಎಫ್‌ಐಎನ್)ನ ನಿರ್ದೇಶಕರಾದ ರವಿ ಪಾರ್ಥಸಾರಥಿ,ರಮೇಶ ಬಾವಾ,ಹರಿ ಶಂಕರಂ, ಅರುಣ ಸಹಾ ಮತ್ತು ರಾಮಚಂದ್ರ ಕರುಣಾಕರನ್ ಅವರು ಸದಸ್ಯರಾಗಿರುವ ಸಮಿತಿಯ ಒಡೆತನದಲ್ಲಿವೆ. ಸಹಾ ಮತ್ತು ಕರುಣಾಕರನ್ ಅವರನ್ನು ಈ.ಡಿ.ಕಳೆದ ಜೂನ್‌ನಲ್ಲಿ ಬಂಧಿಸಿತ್ತು.

ಏರ್‌ಸೆಲ್ ಸ್ಥಾಪಕ ಸಿ.ಶಿವಶಂಕರನ್ ಅವರು ತನ್ನ ಕುಟುಂಬ ಸದಸ್ಯರು ಮತ್ತು ಗ್ರುಪ್ ಕಂಪನಿಗಳ ಹೆಸರುಗಳಲ್ಲಿ ‘ಪರೋಕ್ಷ ’ವಾಗಿ ಹೊಂದಿದ್ದ ಸ್ಥಿರಾಸ್ತಿಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶಿವಶಂಕರನ್ ಜೊತೆ ಕ್ರಿಮಿನಲ್ ಒಳಸಂಚು ನಡೆಸಿದ್ದ ಐಎಲ್ ಆ್ಯಂಡ್ ಎಫ್‌ಎಸ್ ನಿರ್ದೇಶಕರು ಕಪಟ ರೀತಿಯಲ್ಲಿ ಸಿವಾ ಗ್ರುಪ್‌ನ ವಿವಿಧ ಕಂಪನಿಗಳಿಗೆ ಸಾಲಗಳನ್ನು ಒದಗಿಸಿದ್ದು,ಈ ಪೈಕಿ 494 ಕೋ.ರೂ.ಗಳು ಮರುಪಾವತಿಗೆ ಬಾಕಿಯಿವೆ ಎಂದು ಈ.ಡಿ.ಆರೋಪಪಟ್ಟಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News