ರಾಜ್ಯದ ಚರಿತ್ರೆ ತಿರುಚಿದ ಆರೋಪ: ಆರೆಸ್ಸೆಸ್ ವಿರುದ್ಧ ಮಣಿಪುರದಲ್ಲಿ ಭಾರೀ ಆಕ್ರೋಶ

Update: 2019-08-17 17:09 GMT

ಹೊಸದಿಲ್ಲಿ, ಆ. 17: ವಾರ್ಷಿಕ ದಿನಾಚರಣೆಯಲ್ಲಿ ಆರೆಸ್ಸೆಸ್ ಮಣಿಪುರದ ಚರಿತ್ರೆಯನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದನ್ನು ನಾಮಮಾತ್ರ ಮೀತೈ ರಾಜ ಲಿಸೆಂಬಾ ಸನಜಾವೋಬಾ ಸಹಿತ ರಾಜ್ಯದ ವಿವಿಧ ನಾಗರಿಕ ಸಮಾಜ ಹಾಗೂ ವಿದ್ಯಾರ್ಥಿ ಗುಂಪುಗಳು ಶನಿವಾರ ಖಂಡಿಸಿವೆ.

ಇಂಫಾಲದ ನಗರದ ಹೃದಯಭಾಗದಲ್ಲಿರುವ ಕಾಂಗ್ಲಾ ಅರಮನೆ ಮೈದಾನ ಲಾಮ್ಯಾಂಬ ಸಂಗ್ಲೇನ್‌ನಲ್ಲಿ ಆರೆಸ್ಸೆಸ್ ವಾರ್ಷಿಕ ದೇಶಭಕ್ತರ ದಿನಾಚರಣೆ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ರಾಜ ತೀಕೇಂದ್ರಜಿತ್ ಹಾಗೂ ಜನರಲ್ ಥಂಗಾಲ್ ಅವರ ಭಾವಚಿತ್ರಗಳ ನಡುವೆ ಭಾರತ ಮಾತೆಯ ಭಾವಚಿತ್ರವನ್ನು ಇರಿಸಲಾಗಿತ್ತು ಹಾಗೂ ಪುಷ್ಪ ನಮನ ಸಲ್ಲಿಸಲಾಗಿತ್ತು. ಈ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ಕೂಡಲೇ ವೈರಲ್ ಆಗಿತ್ತು. ಅಲ್ಲದೆ, ಈ ದಿನವನ್ನು ಸಾಂಸ್ಕೃತಿಕವಾಗಿ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಹಿಂದೆ ಮಣಿಪುರಿಯ ಚರಿತ್ರೆಗೆ ಸಂಬಂಧಿಸಿದ ಆರೆಸ್ಸೆಸ್ ನ ಯಾವುದೇ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಪ್ರಭಾವಶಾಲಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಜಂಟಿ ವಿದ್ಯಾರ್ಥಿ ಸಮನ್ವಯ ಸಮಿತಿ (ಜೆಎಸ್‌ಸಿಸಿ) ಕರೆ ನೀಡಿತ್ತು. ಅಲ್ಲದೆ ಈ ವಿಷಯದ ಕುರಿತು ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಎಚ್ಚರಿಕೆ ನೀಡಿತ್ತು. ಜೆಸಿಸಿ ಆಲ್ ಮಣಿಪುರ ಸ್ಟೂಡೆಂಟ್ಸ್ ಯೂನಿಯನ್, ಮಣಿಪುರ ಸ್ಟೂಡೆಂಟ್ಸ್ ಫೆಡರೇಶನ್, ಕಾಂಗ್ಲೈಪಾಕ್ ಸ್ಟೂಡೆಂಟ್ಸ್ ಫೆಡರೇಶನ್ ಹಾಗೂ ಸ್ಟೂಡೆಂಟ್ ಯೂನಿಯ್ ಆಫ್ ಕಾಂಗ್ಲೈಪಾಕ್ ಅನ್ನು ಒಳಗೊಂಡಿದೆ. ರಾಜ್ಯದ ಚರಿತ್ರೆ ವಿರೂಪಗೊಳಿಸಿರುವುದಕ್ಕೆ ಆರೆಸ್ಸೆಸ್ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಜೆಎಸ್‌ಸಿಸಿ ಆಗ್ರಹಿಸಿದೆ. ‘‘ಆರೆಸ್ಸೆಸ್ ಮಣಿಪುರಿ ಜನರ ಕ್ಷಮೆ ಯಾಚಿಸದೇ ಇದ್ದರೆ, ಹಲವು ಅಹಿತಕರ ಘಟನೆಗಳು ನಡೆಯಬಹುದು’’ ಎಂದು ಜೆಎಸ್‌ಸಿಸಿ ಸಂಚಾಲಕ ಲೈಶ್ರಾಮ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News