ಕಲ್ಲಡ್ಕ: ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕೊಠಡಿ, ರಂಗಮಂದಿರಕ್ಕೆ ಶಿಲಾನ್ಯಾಸ

Update: 2019-08-17 17:11 GMT

ಬಂಟ್ವಾಳ:  ಕಲ್ಲಡ್ಕದಲ್ಲಿ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಪರಸ್ಪರ ಸೌಹಾರ್ದತೆ ಮತ್ತು ಸಂಘಟನಾತ್ಮಕವಾಗಿ ನಾಗರಿಕರು ಒಟ್ಟು ಸೇರಿ ರೂ 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ಶಾಲಾ ಕಟ್ಟಡಕ್ಕೆ ಎಂಆರ್‍ಪಿಎಲ್ ಸಂಸ್ಥೆಯಿಂದ 64 ಲಕ್ಷ ರೂ ಮೊತ್ತದ ಅನುದಾನ ಈಗಾಗಲೇ ಮಂಜೂರಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 'ಶತಮಾನೋತ್ತರ ಬೆಳ್ಳಿಹಬ್ಬ' ಪ್ರಯುಕ್ತ ನಿರ್ಮಾಣಗೊಳ್ಳಲಿರುವ 10 ಕೊಠಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ 'ಶಿಲೆ' ಹಸ್ತಾಂತರಿಸಿ ಅವರು ಮಾತನಾಡಿದರು.

ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಂಡ ದೇಶಗಳು ಮಾತ್ರ ಅಭಿವೃದ್ಧಿಪಥದಲ್ಲಿ ಮುನ್ನಡೆಯಲು ಸಾಧ್ಯ. ಈ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಯುವಪೀಳಿಗೆಗೆ ಸಂಸ್ಕಾರ ನೀಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

'ಶತಮಾನೋತ್ತರ ಬೆಳ್ಳಿಹಬ್ಬ' ಪ್ರಯುಕ್ತ ನಿರ್ಮಿಸಲಾದ ಮೂರು ಪ್ರತ್ಯೇಕ ಕೊಠಡಿಗಳನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉದ್ಘಾಟಿಸಿದರು. 

ಇದೇ ವೇಳೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ನೂತನ ಸೋಲಾರ್ ಘಟಕ ಅಳವಡಿಸಲು ರೂ 3ಲಕ್ಷ ಅನುದಾನ, ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ರೂ 1ಲಕ್ಷ ಅನುದಾನ, ತಾ.ಪಂ.ಸದಸ್ಯ ಮಹಾಬಲ ಆಳ್ವ ರೂ 50ಸಾವಿರ ಅನುದಾನ ನೀಡುವುದಾಗಿ ಘೋಷಿಸಿದರು. 

ಹಿರಿಯ ಹಳೆ ವಿದ್ಯಾರ್ಥಿ, ದಾನಿ ಪಿ.ಬಿ.ಇಬ್ರಾಹಿಂ ಅವರು ನೀಡಿದ ರೂ 5ಲಕ್ಷ ವೆಚ್ಚದ ರಂಗಮಂದಿರ ನಿರ್ಮಾಣ ಕಾಮಗಾರಿಗೆ ಶಿಕ್ಷಣಪ್ರೇಮಿ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಶಿಲಾನ್ಯಾಸ ನೆರವೇರಿಸಿದರು.

ಆಷಾಢ ಮಾಸದ ವೈವಿಧ್ಯಮಯ ತಿಂಡಿ ತಿನಿಸುಗಳ ಆಹಾರ ಮೇಳವನ್ನು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಉದ್ಘಾಟಿಸಿ ಮಾತನಾಡಿ, ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ 4ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ ಸ್ಥಳೀಯ ಯುವಕರು ನೂತನ ಕಟ್ಟಡ ನಿರ್ಮಾಣಕ್ಕೆ ರೂ 1ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿ ಗಮನ ಸೆಳೆದರು. ಸುಮಾರು 70 ಬಗೆಯ ಆಷಾಢ ಮಾಸದ ವೈವಿಧ್ಯಮಯ ತಿಂಡಿ ತಿನಿಸುಗಳು ಜನಾಕರ್ಷಣೆ ಪಡೆಯಿತು.

ತಾಲ್ಲೂಕು ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಹಿರಿಯ ಹಳೆ ವಿದ್ಯಾರ್ಥಿ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಉದ್ಯಮಿ ಜಿ.ಯೂಸುಫ್ ಗೋಳ್ತಮಜಲು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಡಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಅಬೂಬಕ್ಕರ್ ಆಶ್ರಫ್ ಸ್ವಾಗತಿಸಿ, ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ನಾಗೇಶ ಕೆ. ಪ್ರಾಸ್ತಾವಿಕ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ರಾಜೇಶ ಕೊಟ್ಟಾರಿ ವಂದಿಸಿದರು. ಕಲಾವಿದ ಚಿ.ರಮೇಶ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News