ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು, ಸವಾಲುಗಳು: ವಿಚಾರ ಸಂಕೀರ್ಣಕ್ಕೆ ಚಾಲನೆ

Update: 2019-08-17 17:18 GMT

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಮುಸ್ಲಿಮ್ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಆಯೋಜಿಸಿರುವ ‘ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರಗಳು’ ಕುರಿತ ಎರಡು ದಿನಗಳ ವಿಚಾರಸಂಕೀರ್ಣ ಶನಿವಾರ  ಚಾಲನೆಗೊಂಡಿತು.

ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆದ ಸುಂದರ ಸರಳ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಬ್ಯಾರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ, ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ತಮ್ಮನ್ನು ಒಂದು  ವರ್ಗಕ್ಕೆ ಸೀಮಿತಗೊಳಿಸದೆ ಸಮಾಜದ ಎಲ್ಲಾ ವರ್ಗದವರಿಗಾಗಿ ಕಾರ್ಯನಿರ್ವಹಿಸುವಂತೆ ಆಗ್ರಹಿಸಿದರು.

ನಮ್ಮನ್ನು  ನಾವು ನಿರ್ಬಂಧಿಸಿಕೊಳ್ಳದೆ ನಮ್ಮ ಆಲೋಚನೆಗಳನ್ನು ವಿಸ್ತರಿಸಿಕೊಳ್ಳಬೇಕು ಆಗ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ. ಇದು ನಮ್ಮ ಶಿಕ್ಷಣ ಸಂಸ್ಥೆಗಳ ಯಶಸ್ವಿಗೆ ಅಗತ್ಯವಾಗಿದೆ. ಶಿಕ್ಷಣ ಸಂಸ್ಥೆಗಳು ತಮ್ಮ ಗುಣಮಟ್ಟವನ್ನು ಸುಧಾರಿಕೊಳ್ಳಬೇಕು ಎಲ್ಲ ಸಮುದಾಯದವರು ಶಿಕ್ಷಣ ಪಡೆಯುವಂತಹ ವಾತಾವರಣ ನಿರ್ಮಿಸಿಬೇಕು ಎಂದು ಕರೆ ನೀಡಿದರು.

ಮಂಗಳೂರು ಯೆನೆಪೋಯ ವಿಶ್ವವಿದ್ಯಾಲಯದ ಇಸ್ಲಾಮಿಕ್ ಅದ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಖ್ಯಾತ ಚಿಂತಕ ಜಾವೀದ್ ಜಮೀಲ್ ಮಾತನಾಡಿ, ಮುಸ್ಲಿಮರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸುವಂತಹ ಅನಿವಾರ್ಯತೆ ಇಂದು ಸೃಷ್ಟಿಯಾಗುತ್ತಿದೆ. ನಾವು ಸಾಮಾಜಿಕ ಸಬಲೀಕರಣ ಮತ್ತು ಮಹಿಳಾ ಸಬಲೀಕರಣದ ಕಡೆಗೆ ಹೆಚ್ಚು ಗಮನ ಹರಿಸಬೇಕು ಜೊತೆಗೆ ಬಡ ಮುಸ್ಲಿಮರನ್ನು ನೋಡಿಕೊಳ್ಳಬೇಕು, ಸಮಾಜದ ಕೆಡುಕುಗಳ ವಿರುದ್ಧ ಇಂದು ನಾವು ಧ್ವನಿ ಎತ್ತುತ್ತಿಲ್ಲ ಬದಲಾಗಿ ಬೇರೆ, ಬೇರೆ ಸಮುದಾಯದವರು ಇದಕ್ಕಾಗಿ ಹೋರಾಡುತ್ತಿದ್ದಾರೆ. ನಾವು ಅಲ್ಪಸಂಖ್ಯಾತರು ಎಂಬ ಅಳಲನ್ನು ತೋಡಿಕೊಳ್ಳುತ್ತ ಸುಮ್ಮನೆ ಕೂರುವುದರಲ್ಲಿ ಅರ್ಥವಿಲ್ಲ. ಮುಸ್ಲಿಮರು ತಮ್ಮ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತಹ ಯಾವ ಹೋರಾಟಗಳು ಇಂದು ನಡೆಯುತ್ತಿಲ್ಲ ಎಂದು ವಿಷಾಧಿಸಿದರು.

ಮುಸ್ಲಿಮ್ ಯುವಕರು ಶಿಕ್ಷಣ ಕ್ಷೇತ್ರದಲ್ಲಿ ಇಂದು ಪ್ರಗತಿಯನ್ನು ಸಾಧಿಸುತ್ತಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ಹಿಂದಿದ್ದಾರೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ ಹೇಳಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ ವಹಿಸಿದ್ದರು. 

ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಿತಿ ಸಂಚಾಲಕ ಅಬ್ದುಲ್ ರಕೀಬ್ ಎಂ.ಜೆ, ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದಶಿ ಸಿದ್ದಿಖ್ ಇಸ್ಮಾಯಿಲ್ ಸಂಸ್ಥೆಯನ್ನು ಪರಿಚಯಿಸಿದರು.

ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಅತಿಥಿಗನ್ನು ಪರಿಚಯಿಸಿದರು. ಸೆಮಿನಾರ್ ಸಂಘಟಕ ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ. ಮುಷ್ತಾಖ್ ಆಹ್ಮದ್ ಭಾವಿಕಟ್ಟಿ ಸೆಮಿನಾರ್ ನಡೆಸು ಉದ್ದೇಶವನ್ನು ತಿಳಿಸಿದರು. ಕಾರ್ಯದರ್ಶಿ ಆಫ್ತಾಬ್  ಖಮರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News