ಕ್ರಿಶ್ಚಿಯನ್ ಸಹಶಿಕ್ಷಣ ಸಂಸ್ಥೆಗಳು ಹೆಣ್ಣುಮಕ್ಕಳ ಭವಿಷ್ಯಕ್ಕೆ ಅಸುರಕ್ಷಿತ ಎಂಬ ಭಾವನೆಯಿದೆ: ಹೈಕೋರ್ಟ್

Update: 2019-08-17 17:20 GMT

 ಚೆನ್ನೈ,ಆ.17: ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿನ ಸಹಶಿಕ್ಷಣ ವ್ಯಾಸಂಗವು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಅತ್ಯಂತ ಅಸುರಕ್ಷಿತ ಎಂಬ ಸಾರ್ವತ್ರಿಕ ಭಾವನೆಯಿದೆ ಮತ್ತು ಕ್ರೈಸ್ತ ಮಿಷನರಿ ಸಂಸ್ಥೆಗಳು ಉತ್ತಮ ಶಿಕ್ಷಣವನ್ನು ನೀಡುತ್ತಿವೆಯಾದರೂ ನೈತಿಕತೆ ಕುರಿತು ಅವುಗಳ ಬೋಧನೆಯು ‘ಮಿಲಿಯನ್ ಡಾಲರ್ ಪ್ರಶ್ನೆ ’ಯಾಗಿದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.

 ತಾಂಬರಮ್‌ನ ಮದ್ರಾಸ ಕ್ರಿಶ್ಚಿಯನ್ ಕಾಲೇಜಿನಲ್ಲಿ ತೃತೀಯ ವರ್ಷದ ಪ್ರಾಣಿವಿಜ್ಞಾನ ಕೋರ್ಸ್‌ನ ಕನಿಷ್ಠ 34 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವನ್ನು ಎದುರಿಸುತ್ತಿರುವ ಸಹಾಯಕ ಪ್ರೊಫೆಸರ್ ಸ್ಯಾಮುವೆಲ್ ಟೆನಿಸನ್‌ಗೆ ವಿಚಾರಣಾ ಸಮಿತಿಯು ಜಾರಿಗೊಳಿಸಿರುವ ಶೋಕಾಸ್ ನೋಟಿಸನ್ನು ರದ್ದುಗೊಳಿಸಲು ನಿರಾಕರಿಸಿದ ಸಂದರ್ಭ ನ್ಯಾ.ಎಸ್ ವೈದ್ಯನಾಥನ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ವರ್ಷದ ಜನವರಿಯಲ್ಲಿ ಮೈಸೂರು,ಬೆಂಗಳೂರು ಮತ್ತು ಕೊಡಗುಗಳಿಗೆ ಶೈಕ್ಷಣಿಕ ಪ್ರವಾಸದ ವೇಳೆ ಲೈಂಗಿಕ ಕಿರುಕುಳಗಳನ್ನು ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.

ಕ್ರೈಸ್ತ ಮಿಷನರಿಗಳು ಯಾವಾಗಲೂ ಒಂದಲ್ಲ ಒಂದು ವಿಷಯದಲ್ಲಿ ದಾಳಿಗೆ ಗುರಿಯಾಗುತ್ತಲೇ ಇರುತ್ತವೆ ಎಂದು ಹೇಳಿದ ನ್ಯಾ.ವೈದ್ಯನಾಥನ್ ಅವರು,ಇತರ ಧರ್ಮಗಳ ಜನರನ್ನು ಕಡ್ಡಾಯವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿವೆ ಎಂಬ ಹಲವಾರು ಆರೋಪಗಳು ಮಿಷನರಿಗಳ ವಿರುದ್ಧ ಇವೆ ಎಂದರು.

ಮೂಲತಃ ಮಹಿಳೆಯರ ಕ್ಷೇಮವನ್ನು ಕಾಯ್ದುಕೊಳ್ಳಲು ತರಲಾಗಿದ್ದ ಹಲವಾರು ಕಾನೂನುಗಳ ದುರ್ಬಳಕೆಯನ್ನು ಪ್ರಸ್ತಾಪಿಸಿದ ನ್ಯಾಯಾಲಯವು,ಅಮಾಯಕ ಪುರುಷರನ್ನೂ ರಕ್ಷಿಸಲು ಸರಕಾರವು ಈ ಕಾನೂನುಗಳಿಗೆ ತಿದ್ದುಪಡಿ ತರಲು ಈಗ ಸಕಾಲವಾಗಿದೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News