×
Ad

ಸಂಶಯಾಸ್ಪದ ವ್ಯಕ್ತಿಗಳ ಮಾಹಿತಿ ನೀಡಿ: ಮೀನುಗಾರಿಕಾ ನಿರ್ದೇಶಕ

Update: 2019-08-17 22:54 IST

ಮಂಗಳೂರು, 17: ಕರಾವಳಿಯಾದ್ಯಂತ ಸಮುದ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಯಾವುದೇ ವಿದೇಶಿ ಅಥವಾ ಸಂಶಯಾಸ್ಪದ ಬೋಟ್ ಪ್ರಯಾಣಿಸುತ್ತಿರುವ ಬಗ್ಗೆ ತಿಳಿದರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ನಂ.100 ಕ್ಕೆ ಮಾಹಿತಿ ಒದಗಿಸುವಂತೆ ಮೀನುಗಾರಿಕಾ ಇಲಾಖೆಯ ದ.ಕ. ಜಿಲ್ಲಾ ಉಪ ನಿರ್ದೇಶಕ ತಿಪ್ಪೇಸ್ವಾಮಿ ಮೀನುಗಾರರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾಡಳಿತದ ನಿರ್ದೇಶನ ಪ್ರಕಾರ ನಗರದ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಶನಿವಾರ ಜರುಗಿದ ಮೀನುಗಾರ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಮೀನುಗಾರಿಕೆ ಸಂದರ್ಭ ಮೀನುಗಾರರು ಕೂಡ ತಮ್ಮ ಗುರುತನ್ನು ದೃಢೀಕರಿಸುವ ದಾಖಲೆ, ಆಧಾರ್ ಕಾರ್ಡ್ ಪ್ರತಿಗಳನ್ನು ಜತೆಯಲ್ಲಿ ಇಟ್ಟುಕೊಳ್ಳಬೇಕು. ಹೊರ ರಾಜ್ಯಗಳ ಮೀನುಗಾರರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಮಂಗಳೂರು ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಅವರ ಗುರುತು ಪತ್ತೆಗೆ ಇಲಾಖೆ ಹಾಗೂ ಮೀನುಗಾರರ ಸೊಸೈಟಿಗಳಿಂದ ತಾತ್ಕಾಲಿಕ ನೆಲೆಯ ಗುರುತು ಕಾರ್ಡ್ ಒದಗಿಸಲಾಗುತ್ತಿದೆ ಎಂದರು.

ಮಲ್ಪೆ ಘಟನೆ ಬಳಿಕ ಎಲ್ಲ ಬೋಟ್‌ಗಳಿಗೆ ವೈರ್‌ಲೆಸ್, ಜಿಪಿಎಸ್ ಮತ್ತು ಟ್ರೋನ್ಸ್‌ಪೋಂಡ್ ಸಂವಹನ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಲಾಗಿದೆ. ಸಮುದ್ರದಲ್ಲಿ ಎಷ್ಟು ಬೋಟ್‌ಗಳು ಇವೆ ? ಯಾವ ಪ್ರದೇಶದಲ್ಲಿವೆ ಎನ್ನುವ ಬಗ್ಗೆ ನಿಖರ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಹೊಸ ಆ್ಯಪ್ ರಚಿಸಲಾಗುತ್ತಿದೆ ಎಂದು ಹೇಳಿದರು.

ಶೀಘ್ರದಲ್ಲಿ ಸೆಟಲೈಟ್ ಫೋನ್: ಎಲ್ಲ ಮೀನುಗಾರಿಕೆ ಬೋಟ್‌ಗಳಿಗೆ ಸೆಟಲೈಟ್ ಫೋನ್‌ಗಳನ್ನು ಒದಗಿಸಲು ಚಿಂತನೆ ನಡೆದಿದೆ. ಈ ಫೋನ್ ದುಬಾರಿಯಾಗಿದ್ದು, ಇದನ್ನು ಖರೀದಿಸಲು ಸಹಾಯಧನ ಕೊಡುವ ಬಗ್ಗೆ ಕೂಡ ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದು ಮೀನುಗಾರಿಕಾ ಇಲಾಖೆಯ ದ.ಕ. ಜಿಲ್ಲಾ ಉಪ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.

ಇಲಾಖೆ ಅಧಿಕಾರಿಗಳು ಮೀನುಗಾರಿಕೆ ಹಾಗೂ ಭದ್ರತೆ ಸಂಬಂಧಿಸಿದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅನುಕೂಲವಾಗುವಂತೆ ಈಗಾಗಲೇ ವಾಟ್ಸ್‌ಆ್ಯಪ್ ಗ್ರೂಪ್‌ವೊಂದನ್ನು ಆರಂಭಿಸಿದೆ. ಮೀನುಗಾರ ಸಂಘಟನೆ ಹಾಗೂ ಮುಖಂಡರ ಕಡೆಯಿಂದ ಪೂರ್ಣ ಸಹಕಾರ ದೊರೆಯುತ್ತಿದೆ ಎಂದವರು ತಿಳಿಸಿದರು.

ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್‌ಕುಮಾರ್, ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಸುಭಾಷ್, ಮುಖಂಡ ಇಬ್ರಾಹೀಂ ಸಲಹೆ-ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News