ದಲಿತ ವ್ಯಕ್ತಿಯ ಆತ್ಮಹತ್ಯೆ ಪ್ರಕರಣ: ಕುಟುಂಬದವರ ಪ್ರತಿಭಟನೆ

Update: 2019-08-17 17:30 GMT

ಜೈಪುರ, ಆ.17: ತನ್ನ ಪುತ್ರನನ್ನು ಕಳೆದ ತಿಂಗಳು ಕೆಲವರು ಥಳಿಸಿ ಹತ್ಯೆಗೈದ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ದಲಿತ ವ್ಯಕ್ತಿಯೊಬ್ಬರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತದೇಹದ ಮರಣೋತ್ತರ ಪರೀಕ್ಷೆಗೆ ಆಸ್ಪದ ನೀಡದೆ ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

 ರತಿರಾಮ್ ಜಾಟವ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಜುಲೈ 16ರಂದು ಇವರ ಮಗ ಹರೀಶ್(28 ವರ್ಷ) ಚಲಾಯಿಸುತ್ತಿದ್ದ ಬೈಕ್ ಫಾಲ್ಸಾ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಢಿಕ್ಕಿಯಾಗಿತ್ತು. ಈ ಸಂದರ್ಭ ಗುಂಪೊಂದು ಹರೀಶ್‌ ರನ್ನು ಹಿಗ್ಗಾಮುಗ್ಗಾ ಥಳಿಸಿದ ಕಾರಣ ತಲೆಗೆ ಗಂಭೀರ ಗಾಯವಾಗಿತ್ತು. ಎರಡು ದಿನದ ಬಳಿಕ ಹರೀಶ್ ಮೃತಪಟ್ಟಿದ್ದ. ಪುತ್ರನ ಮರಣದಿಂದ ಖಿನ್ನನಾಗಿದ್ದ ಜಾಟವ್ ಗುರುವಾರ ವಿಷ ಕುಡಿದು ಮೃತಪಟ್ಟಿದ್ದಾರೆ. ಪುತ್ರನಿಗೆ ಥಳಿಸಿ ಆತನ ಸಾವಿಗೆ ಕಾರಣರಾದವರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಜಾಟವ್ ಹತಾಶನಾಗಿದ್ದರು. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ಹೆಚ್ಚುವರಿ ಎಸ್ಪಿ ಮತ್ತು ವೃತ್ತ ನಿರೀಕ್ಷಕರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.

ಮೃತನ ಕುಟುಂಬದವರಿಗೆ ಪರಿಹಾರ ಒದಗಿಸಬೇಕು ಹಾಗೂ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರೂ ಪಾಲ್ಗೊಂಡರು. ಆಲ್ವಾರ್‌ನ ಸಂಸದ ಮಹಾಂತ್ ಬಾಲಕಾಂತ್ ಮೃತ ವ್ಯಕ್ತಿಯ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಕುಟುಂಬದವರ ಬೇಡಿಕೆ ಈಡೇರಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News