ಅಪರಾಧ ಹಿನ್ನೆಲೆಯ ರಾಜಕಾರಣಿಗಳ ಆಯ್ಕೆ ಮೌಲ್ಯಾಧಾರಿತ ರಾಜಕಾರಣಕ್ಕೆ ಹಿನ್ನಡೆ : ಆರ್.ಎನ್.ಕುಲಕರ್ಣಿ

Update: 2019-08-17 17:34 GMT

ಮಂಗಳೂರು, ಆ.17: ದೇಶದಲ್ಲಿ ಶಾಸನವನ್ನು ರಚಿಸುವವರಲ್ಲಿ ಶೇ 36ರಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವವರು ಆಯ್ಕೆಯಾಗುತ್ತಿರುವುದು ನಮ್ಮ ದೇಶದ ರಾಜಕೀಯ ವ್ಯವಸ್ಥೆ ಮೌಲ್ಯ ಕಳೆದುಕೊಳ್ಳುತ್ತಿರುವುದರ ಸಂಕೇತವಾಗಿದೆ ಎಂದು ಭಾರತದ ಗುಪ್ತಚರ ವಿಭಾಗದ ನಿವೃತ್ತ ಹಿರಿಯ ಅಧಿಕಾರಿ ಆರ್.ಎನ್.ಕುಲಕರ್ಣಿ ತಿಳಿಸಿದ್ದಾರೆ.

ನಗರದ ಎಸ್.ಡಿ.ಎಂ ವ್ಯವಹಾರ ಅಧ್ಯಯನ ಕಾಲೇಜಿನ ಸಭಾಂಗಣದಲ್ಲಿಂದು ಮಂಥನ ಸಂಘಟನೆಯ ವತಿಯಿಂದ ಹಮ್ಮಿಕೊಂಡ ‘ಫ್ಯಾಕ್ಟ್ಸ್ ಆಫ್ ಟೆರರಿಸಂ ಇನ್ ಇಂಡಿಯಾ’ ಎಂಬ ತಮ್ಮ ಕೃತಿಯ ಬಿಡುಗಡೆ ಸಮಾರಂಭ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಜನ ಸಾಮಾನ್ಯರಲ್ಲಿ ಇರುವ ಅಜ್ಞಾನ ಮತ್ತು ಮಾಹಿತಿಯ ಕೊರತೆಯಿಂದ ಆಳುವ ವರ್ಗದಲ್ಲೂ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳು ಆಯ್ಕೆಯಾಗುತ್ತಿರುವುದು ನಡೆಯುತ್ತಿದೆ. ದೇಶದಲ್ಲಿ ಕಾನೂನು ಪ್ರಕಾರ ಆಡಳಿತ ನಡೆಯದೆ ಇರುವುದು, ಪ್ರತಿಭೆಗೆ ಸೂಕ್ತ ಸ್ಥಾನ ಮಾನ ದೊರೆಯದೆ ಇರುವುದು, ಅಧಿಕಾರ ನಡೆಸುವ ನಿರ್ಧಾರ ಕೈಗೊಳ್ಳುವಲ್ಲಿ ಸಮರ್ಥರ ಆಯ್ಕೆ ಆಗದಿರುವುದು ದೇಶದ ಬೆಳವಣಿಗೆಗೆ , ಮೌಲ್ಯಾಧಾರಿತ ರಾಜಕಾರಣಕ್ಕೆ ಹಿನ್ನಡೆಯಾಗುತ್ತಿದೆ. ಅದೇ ರೀತಿ ಆಡಳಿತ ನಡೆಸುವವರಲ್ಲೂ ಮಾಹಿತಿಯ ಕೊರತೆ ಇದೆ. ಚುನಾವಣೆಯ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳು ನಮ್ಮ ಬಳಿ ತಮ್ಮ ರಾಜಕೀಯ ಭವಿಷ್ಯವನ್ನು ಗುಟ್ಟಾಗಿ ಕೇಳುತ್ತಿದ್ದರು. ಸೋತರೆ ನಮ್ಮನ್ನು ಕಾರಣ ಎನ್ನುತ್ತಾರೆ. ಪೊಲೀಸ್ ವ್ಯವಸ್ಥೆ ಹಾಗೂ ಗುಪ್ತಚರ ಇಲಾಖೆ ಪ್ರತ್ಯೇಕವಾಗಿದ್ದರೂ ಅದು ಒಂದೇ ರೀತಿಯ ಇಲಾಖೆ ಎಂಬ ರೀತಿಯ ಅಭಿಪ್ರಾಯ ಜನಸಾಮಾನ್ಯರಲ್ಲಿದೆ. ದೇಶದಲ್ಲಿ ಭಯೋತ್ಪಾಧನೆಗೆ ಧರ್ಮ ಮತ್ತು ಧರ್ಮ ಗ್ರಂಥಗಳ ಬಗ್ಗೆ ಇರುವ ತಪ್ಪು ಗ್ರಹಿಕೆಗಳು ಕಾರಣ. ವಿವಿಧ ಧರ್ಮಗಳ ನಡುವಿನ ಜನರ ನಡುವೆ ಪರಸ್ಪರ ಗೌರವ ಭಾವನೆಗಳಿದ್ದಾಗ ಒಳ್ಳೆಯ ವಾತವರಣ ನಿರ್ಮಾಣ ವಾಗುತ್ತದೆ ಎಂದು ಕುಲಕರ್ಣಿ ತಿಳಿಸಿದ್ದಾರೆ.

ಪುಸ್ತಕವನ್ನು ಬಿಡುಗಡೆಗೊಳಿಸಿದ ನಿವೃತ್ತ ಡಿಜಿಪಿ ಎಂ.ಎನ್.ಕೃಷ್ಣ ಮೂರ್ತಿ ಮಾತನಾಡುತ್ತಾ ದೇಶದಲ್ಲಿ ಓಟ್ ಬ್ಯಾಂಕ್‌ಗಾಗಿ ನಡೆಯುತ್ತಿರುವ ರಾಜಕಾರಣ ನಡುವೆ ಇಂದಿನ ಯುವ ಜನರಿಗೆ ಮಾಹಿತಿ ನೀಡುವ ದೃಷ್ಟಿಯಲ್ಲಿ ಆರ್.ಎನ್. ಕುಲಕರ್ಣಿಯವರ ಪುಸ್ತಕ ಉಪಯುಕ್ತವಾಗಿದೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಮಣಿಪಾಲ ಉನ್ನತ ಶಿಕ್ಷಣ ಅಧ್ಯಯನ ಸಂಸ್ಥೆಯ ಪ್ರೊ. ಡಾ.ನಂದನ ಪ್ರಭು ಕೃತಿಯನ್ನು ಪರಿಚಯಿಸಿದರು. ಮಂಥನ ಸಂಸ್ಥೆಯ ಸಂಘಟಕರಾದ ಸುನಿಲ್ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News