ಬುಡಕಟ್ಟು ಪ್ರದೇಶ ಸ್ಥಾನಮಾನ ನೀಡಿ: ಕೇಂದ್ರಕ್ಕೆ ಲಡಾಖ್ ಮುಖಂಡರ ಆಗ್ರಹ

Update: 2019-08-18 13:58 GMT

ಲೇಹ್, ಆ.18: ಲಡಾಖ್ ಪ್ರದೇಶಕ್ಕೆ ಸಂವಿಧಾನದ 6ನೇ ಅನುಬಂಧದಡಿ ಬುಡಕಟ್ಟು ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿರುವ ಲಡಾಖ್ ಮುಖಂಡರು, ತಮ್ಮ ಭೂಮಿ ಮತ್ತು ಅನನ್ಯತೆಯನ್ನು ರಕ್ಷಿಸುವುದೇ ಅತ್ಯಂತ ಕಳವಳದ ವಿಷಯವಾಗಿದೆ ಎಂದು ಹೇಳಿದ್ದಾರೆ.

370ನೇ ವಿಧಿಯನ್ನು ರದ್ದುಗೊಳಿಸಿ ಲಡಾಖನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸ್ಥಳೀಯರು ಸ್ವಾಗತಿಸಿದ್ದರೂ ಹೊರಗಿನ ವ್ಯಕ್ತಿಗಳ ಒಳಪ್ರವೇಶದಿಂದ ಪ್ರದೇಶದ ಜನಸಂಖ್ಯೆಯಲ್ಲಿ ಬದಲಾವಣೆಯಾಗಿ ಸ್ಥಳೀಯರು ತಮ್ಮ ಅನನ್ಯತೆ ಮತ್ತು ಸಂಸ್ಕೃತಿ ಅಪಾಯಕ್ಕೆ ಸಿಲುಕಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಲಡಾಖ್‌ನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದ ವತಿಯಿಂದ 9ದಿನ ನಡೆಯಲಿರುವ ಆದಿ ಮಹೋತ್ಸವ ಕಾರ್ಯಕ್ರಮಕ್ಕೆ ಆಗಸ್ಟ್ 17ರಂದು ಚಾಲನೆ ನೀಡಿ ಮಾತನಾಡಿದ ಸ್ಥಳೀಯ ಬಿಜೆಪಿ ಸಂಸದ ಜಮ್ಯಂಗ್ ಸೆರಿಂಗ್ ನಮ್ಗಾಲ್ , ಈ ಪ್ರದೇಶದ ಜನಸಂಖ್ಯೆಯಲ್ಲಿ ಶೇ.98ರಷ್ಟು ಬುಡಕಟ್ಟು ಸಮುದಾಯದವರು. ಸ್ಥಳೀಯರ ಹಿತಾಸಕ್ತಿಯ ರಕ್ಷಣೆಗಾಗಿ ಈ ಪ್ರದೇಶಕ್ಕೆ ಬುಡಕಟ್ಟು ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ಈ ಬಗ್ಗೆ ಕೇಂದ್ರದ ಬುಡಕಟ್ಟು ವ್ಯವಹಾರ ಸಚಿವ ಅರ್ಜುನ್ ಮುಂಡಾಗೆ ಮನವಿ ಸಲ್ಲಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದ ಸರಕಾರದಡಿ ಬುಡಕಟ್ಟು ಸಮುದಾಯಕ್ಕೆ ಸೌಲಭ್ಯ ಕಲ್ಪಿಸುವ ಹಲವಾರು ಯೋಜನೆಗಳು ಲಡಾಖ್‌ನಲ್ಲಿ ಜಾರಿಯಾಗಲಿಲ್ಲ. ಸ್ಕಾಲರ್‌ಶಿಪ್, ಹಾಸ್ಟೆಲ್‌ಗಳು, ಬುಡಕಟ್ಟು ಜನರಿಗಾಗಿ ಶಾಲೆ ಮುಂತಾದ ಸೌಲಭ್ಯ ಸ್ಥಳೀಯರಿಗೆ ದೊರಕಲಿಲ್ಲ ಎಂದವರು ಹೇಳಿದ್ದಾರೆ. ಈ ಬೇಡಿಕೆಗೆ ಲಡಾಕ್ ಸ್ವಾಯತ್ತ ಪ್ರದೇಶ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗ್ಯಾಲ್ ಪಿ ವಂಗ್ಯಾಲ್ ಧ್ವನಿಗೂಡಿಸಿದ್ದಾರೆ.

ಬಳಿಕ ಮಾತನಾಡಿದ ಅರ್ಜುನ್ ಮುಂಡಾ, ಸ್ಥಳೀಯರ ಬೇಡಿಕೆಯನ್ನು ಗೃಹ ಸಚಿವ ಅಮಿತ್ ಶಾ ಗಮನಕ್ಕೆ ತಂದು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ಸಭೆಯ ಬಳಿಕ ಸಚಿವ ಮುಂಡಾರನ್ನು ಭೇಟಿಯಾದ ಜಮ್ಮು ಕಾಶ್ಮೀರ ವಿಧಾನಪರಿಷತ್ ಅಧ್ಯಕ್ಷ ಅನಾಯತ್ ಅಲಿ ಲಡಾಖ್‌ನ ಯುವಜನತೆಗೆ ಉದ್ಯೋಗ ಮೀಸಲಾತಿ ಮತ್ತಿತರ ವಿಷಯಗಳಲ್ಲಿ ಎದುರಾಗಿರುವ ಸಮಸ್ಯೆಯನ್ನು ಅವರ ಗಮನಕ್ಕೆ ತಂದರು.

ಬುಡಕಟ್ಟು ಸ್ಥಾನಮಾನ ಪಡೆದ ಪ್ರದೇಶಗಳಲ್ಲಿ ಸ್ವಾಯತ್ತ ಜಿಲ್ಲೆಗಳನ್ನು ಸ್ಥಾಪಿಸಿ ಸ್ಥಳೀಯ ಸಮಿತಿಯ ಮೂಲಕ ಆಡಳಿತ ನಿರ್ವಹಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News