ಸಹಕಾರಿ ಸಂಘಗಳಿಗೆ ವಿನಾಯಿತಿ ನೀಡಲು ಡಾ.ರಾಜೇಂದ್ರ ಕುಮಾರ್ ಒತ್ತಾಯ

Update: 2019-08-18 14:34 GMT

ಮಂಗಳೂರು, ಆ.18: ಕೇಂದ್ರದ ಸರಕಾರದ ‘ರಸಗೊಬ್ಬರ ಮಾರಾಟ ಪರವಾನಿಗೆಗೆ ಕೃಷಿ ವಿಜ್ಞಾನ ಪದವಿ ಕಡ್ಡಾಯ’ ಸುತ್ತೋಲೆಯ ಜಾರಿಗೆ ಗ್ರಾಮೀಣ ಪ್ರದೇಶದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಸಾಧ್ಯ. ಸಹಕಾರಿ ಸಂಘಗಳಿಗೆ ಈ ಸುತ್ತೋಲೆಯಿಂದ ವಿನಾಯಿತಿ ನೀಡಬೇಕು ಎಂದು ಡಾ.ರಾಜೇಂದ್ರಕುಮಾರ್ ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಸುತ್ತೋಲೆಯ ವಿನಾಯಿತಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.

ಕೃಷಿ ಇಲಾಖೆಯ ಮೂಲಕ ರಸಗೊಬ್ಬರ ಮಾರಾಟ ಕೇಂದ್ರ ತೆರೆಯಲು ಪರವಾನಿಗೆ ಪಡೆಯಲು ಕಡ್ಡಾಯವಾಗಿ ಕೃಷಿ ವಿಜ್ಞಾನದಲ್ಲಿ ಪದವಿ ಅಥವಾ ಡಿಪ್ಲೊಮಾ ಇನ್ ಎಇಎಸ್‌ಐ ಪ್ರೋಗ್ರಾಮ್ ಅರ್ಹತೆ ಹೊಂದಿರಬೇಕು ಎಂಬ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು 2018ರ ಜುಲೈ 30ರಂದು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ರಸಗೊಬ್ಬರವನ್ನು ಮಾರಾಟ ಮಾಡುವುದು ಅಸಾಧ್ಯ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

ಈಗಾಗಲೇ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಆಯಾ ಕಾಲಕ್ಕೆ ಸರಕಾರ ನಿಗದಿಪಡಿಸಿದ ಬೆಲೆಯಲ್ಲಿ ರಸಗೊಬ್ಬರ ನೀಡುತ್ತಿದೆ. ಆದರೆ, ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕರು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿಲ್ಲ. ಇದರಿಂದ ಸರಕಾರದ ಸುತ್ತೋಲೆ ಪ್ರಕಾರ ಪರವಾನಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ರಸಗೊಬ್ಬರ ಮಾರಾಟ ಸ್ಥಗಿತಗೊಂಡರೆ ಕೃಷಿ ಪತ್ತಿನ ಸಹಕಾರ ಸಂಘಗಳು ತೀರಾ ನಷ್ಟ ಅನುಭವಿಸಲಿದೆ. ರೈತರು ಸೊಸೈಟಿಯಲ್ಲಿ ರಸಗೊಬ್ಬರ ದೊರೆಯದೆ ಖಾಸಗಿ ಮಾರಾಟಗಾರರ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಪರಿಣಾಮ ರೈತರು ಅಧಿಕ ಬೆಲೆ ನೀಡಿ ರಸಗೊಬ್ಬರ ಖರೀದಿಸಬೇಕಾಗುತ್ತದೆ ಅಗತ್ಯ ನಿರ್ಮಾಣವಾಗಲಿದೆ ಎಂದರು.

ರೈತರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಿತದೃಷ್ಟಿಯಿಂದ ಈಗ ಇರುವ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಡಾ.ರಾಜೇಂದ್ರ ಕುಮಾರ್ ಅವರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಲ್ಲಿ ಒತ್ತಾಯಿಸಿದರು.

ಜನರಿಕ್ ಜನೌಷಧಿ: ರಾಜ್ಯದಲ್ಲಿ ರೈತರಿಗೆ ಗೊಬ್ಬರ ಮತ್ತು ಕೃಷಿ ಸಾಮಗ್ರಿ ವಿತರಿಸುವಲ್ಲಿ ಯಶಸ್ವಿಯಾಗಿರುವ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಜನರಿಕ್ ಜನೌಷಧಿ ಕೇಂದ್ರಗಳಿಗೆ ಔಷಧ ವಿತರಿಸುವ ರಾಜ್ಯ ಏಜೆನ್ಸಿ ನೀಡಬೇಕು. ಎಲ್ಲ ಜಿಲ್ಲೆಗಳಲ್ಲಿರುವ ಸಹಕಾರ ಮಾರಾಟ ಮಹಾಮಂಡಳದ ಶಾಖೆಗಳಲ್ಲೂ ಜನರಿಕ್ ಜನೌಷಧಿಗಳನ್ನು ವಿತರಿಸಲು ಅನುಮತಿ ನೀಡುಬೇಕು ಎಂದು ಡಾ.ರಾಜೇಂದ್ರಕುಮಾರ್ ಒತ್ತಾಯಿಸಿದರು.

ಡಾ.ರಾಜೇಂದ್ರಕುಮಾರ್ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು, ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉಪಸ್ಥಿತರಿದ್ದರು.

ಸಿಎಂ ಪರಿಹಾರ ನಿಧಿಗೆ 50 ಲಕ್ಷ ನೀಡಲು ತೀರ್ಮಾನ

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಯಿಂದ ಉಂಟಾದ ಜಲಪ್ರಳಯದಿಂದ ಸಾವಿರಾರು ಮನೆಗಳು ನೆಲಸಮವಾಗಿದ್ದು, ಕುಟುಂಬಗಳನ್ನು ನಿರ್ಗತಿರನ್ನಾಗಿ ಮಾಡಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ವತಿಯಿಂದ 50 ಲಕ್ಷ ರೂ. ದೇಣಿಗೆಯನ್ನು ‘ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿ’ಗೆ ನೀಡಲು ಸಂಸ್ಥೆಯ ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಡಾ. ಎಂ.ಎನ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News