ಜಮ್ಮು ಕಾಶ್ಮೀರ: ಮತ್ತೆ 5 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ

Update: 2019-08-18 14:49 GMT

 ಶ್ರೀನಗರ, ಆ. 18: ಕಡಿಮೆ ವೇಗದ (2ಜಿ) ಮೊಬೈಲ್ ಇಂಟರ್‌ನೆಟ್ ಸೇವೆ ಮರು ಆರಂಭಿಸಿದ ಒಂದು ದಿನದ ಬಳಿಕ ವದಂತಿ ಹರಡುವುದನ್ನು ತಡೆಯಲು ಜಮ್ಮು ವಲಯದ ಐದು ಜಿಲ್ಲೆಗಳಲ್ಲಿ ರವಿವಾರ ಮತ್ತೆ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.

ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸುವಂತೆ ಸೇವಾ ಪೂರೈಕೆದಾರರಿಗೆ ನಿರ್ದೇಶಿಸ ಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಲಯದಲ್ಲಿ ಶಾಂತಿ ಕಾಪಾಡಲು ಹಾಗೂ ವಂದಂತಿ ಹರಡುವುದನ್ನು ತಡೆಯಲು ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ಜಿಲ್ಲೆಗಳಾದ ಜಮ್ಮು, ಸಾಂಬಾ, ಕಥುವಾ, ಉಧಮ್‌ಪುರ, ರಿಯಾಸಿಯಲ್ಲಿ ಕಡಿಮೆ ವೇಗದ ಇಂಟರ್‌ನೆಟ್ ಸೇವೆಯನ್ನು ಶುಕ್ರವಾರ ಹಾಗೂ ಶನಿವಾರ ನಡುವಿನ ರಾತ್ರಿ ಮರು ಆರಂಭಿಸಲಾಗಿತ್ತು.

  ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಒಂದು ದಿನ ಮೊದಲು ಆಗಸ್ಟ್ 4ರಂದು ಜಮ್ಮು ವಲಯದಲ್ಲಿ ಕೇಂದ್ರ ಸರಕಾರ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿತ್ತು. ಈ ನಡೆಗಿಂತ ಒಂದು ಗಂಟೆಗೆ ಮುನ್ನ ರಾಜ್ಯದಲ್ಲಿ ನಿರ್ಬಂಧ ವಿಧಿಸಿತ್ತು. ಆದರೆ, ಈ ನಿರ್ಬಂಧವನ್ನು ಈದ್ ಹಬ್ಬದ ಸಂದರ್ಭ ಹಿಂಪಡೆಯಲಾಗಿತ್ತು.

ಜಮ್ಮು ವಲಯದ ಐದು ಜಿಲ್ಲೆಗಳಲ್ಲಿ 2ಜಿ ಮೊಬೈಲ್ ಇಂಟರ್‌ನೆಟ್ ಸೇವೆ ಮರು ಆರಂಭಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದ ಐಜಿಪಿ ಮುಖೇಶ್ ಸಿಂಗ್, ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಅಥವಾ ವೀಡಿಯೊ ಪ್ರಸಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News