ಪತ್ನಿಯ ವಿದೇಶ ಪ್ರಯಾಣ ತಡೆಯಲು ಹುಸಿ ಬಾಂಬ್ ಕರೆ ಮಾಡಿದ ಉದ್ಯಮಿಯ ಬಂಧನ

Update: 2019-08-18 14:55 GMT

ಹೊಸದಿಲ್ಲಿ, ಆ.18: ತನ್ನ ಪತ್ನಿ ವಿದೇಶಕ್ಕೆ ತೆರಳುವುದನ್ನು ತಡೆಯುವ ಉದ್ದೇಶದಿಂದ ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ ಉದ್ಯಮಿಯನ್ನು ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಬಂಧಿತ ಆರೋಪಿಯನ್ನು ದಿಲ್ಲಿ ನಿವಾಸಿ 29ರ ಹರೆಯದ ನಸೀರುದ್ದೀನ್ ಎಂದು ಗುರುತಿಸಲಾಗಿದೆ. ಆರೋಪಿಯು ಆಗಸ್ಟ್ 8ರಂದು ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಝಮೀನ ಅಲಿಯಾಸ್ ರಫಿಯಾ ಹೆಸರಿನ ಪ್ರಯಾಣಿಕೆ ದುಬೈ ಅಥವಾ ಸೌದಿ ಅರೇಬಿಯಕ್ಕೆ ತೆರಳುವ ವಿಮಾನವನ್ನು ಸ್ಫೋಟಿಸಲು ಸಂಚು ರೂಪಿಸಿರುವುದಾಗಿ ತಿಳಿಸಿದ್ದ. ಕರೆ ಬಂದ ಕೂಡಲೇ ಕಾರ್ಯೋನ್ಮುಖರಾದ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ಘೋಷಿಸಿ ಶೋಧಕಾರ್ಯ ನಡೆಸಿದರು ಮತ್ತು ಈ ಕುರಿತು ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಯಿತು. ಆದರೆ ನಂತರ ಇದು ಒಂದು ಸುಳ್ಳು ಕರೆ ಎಂದು ತಿಳಿದುಬಂದಿತ್ತು ಎಂದು ವರದಿಗಳು ತಿಳಿಸಿವೆ.

ಸ್ವಾತಂತ್ರ್ಯ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಭದ್ರತಾ ವ್ಯವಸ್ಥೆಯನ್ನು ಹೆಚ್ಚುಗೊಳಿಸಲಾಗಿದ್ದ ಸಮಯದಲ್ಲೇ ಈ ಕರೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ. 2017ರಲ್ಲಿ ವಿವಾಹವಾಗಿದ್ದ ನಸೀರುದ್ದೀನ್ ಮತ್ತು ಝಮೀನ ಮಧ್ಯೆ ಹಣದ ವಿಷಯಕ್ಕೆ ಸಂಬಂಧಿಸಿ ಆಗಾಗ ಜಗಳಗಳು ನಡೆಯುತ್ತಿದ್ದವು. ನಸೀರುದ್ದೀನ್ ಬಿಹಾರಕ್ಕೆ ತೆರಳಿದ ನಂತರ ಝಮೀನ ಹಣ ಸಂಪಾದಿಸಲು ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News