ಕನಿಷ್ಟ ಮಟ್ಟಕ್ಕೆ ಕುಸಿದ ಪ್ರಜಾಪ್ರಭುತ್ವ: ಗಾಂಧಿ ಶಾಂತಿ ಪ್ರತಿಷ್ಠಾನ ಕಳವಳ

Update: 2019-08-18 16:03 GMT

ಹೊಸದಿಲ್ಲಿ, ಆ.18: ಕಾಶ್ಮೀರದ ಕುರಿತ ಕೇಂದ್ರ ಸರಕಾರದ ನಿರ್ಧಾರವು ದೇಶವನ್ನು ಸಂದಿಗ್ಧತೆಗೆ ನೂಕಿದ್ದು, ಕಾಶ್ಮೀರವನ್ನು ಶವಾಗಾರವಾಗಿಸಿದೆ ಎಂದು ಗಾಂಧಿ ಶಾಂತಿ ಪ್ರತಿಷ್ಠಾನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾಶ್ಮೀರಕ್ಕೆ ಸಂಬಂಧಿಸಿದ ಬದಲಾವಣೆಯನ್ನು ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ತರಾತುರಿಯಲ್ಲಿ ಜಾರಿಗೊಳಿಸಿದ ಬಗ್ಗೆಯೂ ಪ್ರತಿಷ್ಠಾನ ಅಸಮಾಧಾನ ವ್ಯಕ್ತಪಡಿಸಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಲೋಕಸಭೆಯನ್ನು ಈ ರೀತಿಯಲ್ಲಿ ಅವಮಾನಗೊಳಿಸಿರಲಿಲ್ಲ. ಈ ಬಾರಿ ನಮ್ಮ ಪ್ರಜಾಪ್ರಭುತ್ವ ಅತ್ಯಂತ ಕನಿಷ್ಟ ಮಟ್ಟಕ್ಕೆ ಕುಸಿದಿದೆ ಎಂದು ಹೇಳಿಕೆ ತಿಳಿಸಿದೆ.

ಜಮ್ಮು ಕಾಶ್ಮೀರವನ್ನು ಮೂರು ಕುಟುಂಬಗಳು ಹಾಳುಗೆಡವಿದವು ಮತ್ತು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾದವು ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರತಿಷ್ಠಾನ, ಕಾಂಗ್ರೆಸ್ ಮಾತ್ರವಲ್ಲ ಈ ಹಿಂದಿನ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಹಾಗೂ ಈಗಿನ ಸರಕಾರವೂ ಕಾಶ್ಮೀರದ ಈ ಕುಟುಂಬದೊಂದಿಗೆ ಅಧಿಕಾರ ಹಂಚಿಕೊಂಡಿದೆ. ಹಾಗಿದ್ದರೆ ಈ ಸರಕಾರಗಳೂ ಲೂಟಿಯಲ್ಲಿ ಪಾಲು ಪಡೆದಿವೆಯೇ ಎಂದು ಪ್ರಶ್ನಿಸಿದೆ.

 ಈ ಬಿಕ್ಕಟ್ಟಿನ ಘಳಿಗೆಯಲ್ಲಿ ಭಾರತದ ಇತರ ಭಾಗಗಳ ಜನರೂ ಕಾಶ್ಮೀರದೊಂದಿಗೆ ನಿಲ್ಲಬೇಕು ಮತ್ತು ಸರಕಾರ ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಲ್ಲ, ಮಾನವ ಹಕ್ಕುಗಳನ್ನೂ ಕಾಪಾಡುವುದನ್ನು ಖಾತರಿಗೊಳಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News