ಉ.ಪ್ರದೇಶ: ಪತ್ರಕರ್ತನ ಗುಂಡಿಕ್ಕಿ ಹತ್ಯೆ

Update: 2019-08-18 16:06 GMT

ಲಕ್ನೊ, ಆ.18: ಹಸುವಿನ ಸಗಣಿ ವಿಲೇವಾರಿ ಮಾಡುವ ವಿಷಯದಲ್ಲಿ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ಪ್ರಮುಖ ಹಿಂದಿ ದಿನಪತ್ರಿಕೆಯ ಫೋಟೋಜರ್ನಲಿಸ್ಟ್( ಫೋಟೋಗ್ರಾಫರ್) ಹಾಗೂ ಆತನ ಸಹೋದರನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಸಹಾರನ್‌ಪುರದಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.

ಹಸುವಿನ ಸಗಣಿ ಬಿಸಾಡಿದ ಕಾರಣಕ್ಕೆ ಪತ್ರಕರ್ತ ಆಶೀಷ್ (23ವರ್ಷ) ಹಾಗೂ ನೆರೆಮನೆಯ ಮಹಿಪಾಲ್ ಸೈನಿ ಎಂಬ ವ್ಯಕ್ತಿಯ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಆಶೀಷ್ ಮನೆಗೆ ನುಗ್ಗಿದ ಮಹಿಪಾಲ್ ಹಾಗೂ ಆತನ ಪುತ್ರ ಅಲ್ಲಿ ಮತ್ತೆ ಜಗಳ ತೆಗೆದು ತಮ್ಮಲ್ಲಿದ್ದ ರಿವಾಲ್ವರ್‌ನಿಂದ ಆಶೀಷ್ ಮತ್ತು ಆತನ ಸಹೋದರ ಅಶುತೋಷ್ ಮೇಲೆ ಗುಂಡು ಹಾರಿಸಿದ್ದಾರೆ.

 ಗಲಾಟೆ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಶೀಷ್ ಮತ್ತಾತನ ಸಹೋದರನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು . ಆರೋಪಿಗಳು ಪರಾರಿಯಾಗಿದ್ದು ಅವರನ್ನು ಪತ್ತೆ ಹಚ್ಚಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರ ಮನೆಯವರಿಗೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ ಎಂದು ಉ.ಪ್ರದೇಶ ಮುಖ್ಯಮಂತ್ರಿಯವರ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News