ಯಡಿಯೂರಪ್ಪರ ಸುಪುತ್ರನಿಂದ ವರ್ಗಾವಣೆ ದಂಧೆಯ ನಿರ್ವಹಣೆ: ಕುಮಾರಸ್ವಾಮಿ ಆರೋಪ

Update: 2019-08-18 16:07 GMT

ಉಡುಪಿ, ಆ.18: ಇಂದು ರಾಜ್ಯದಲ್ಲಿ ವರ್ಗಾವಣೆ ವಿಚಾರದಲ್ಲಿ ಬಿಡ್ಡಿಂಗ್ ನಡೆಸಲಾಗುತ್ತಿದೆ. ಯಡಿಯೂರಪ್ಪ ವರ್ಗಾವಣೆ ದಂಧೆಯಲ್ಲಿ ಬಿಡ್ಡಿಂಗ್ ನಿರ್ವಹಣೆ ಮಾಡಲು ತಮ್ಮ ಸುಪುತ್ರನನ್ನೇ ಬಿಟ್ಡಿದ್ದಾರೆ. ಈ ವಿಚಾರ ಇಡೀ ಸರಕಾರದ ಅಧಿಕಾರಿಗಳಿಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಚಾರಗಳು ಹೊರಬರಲಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಮೈತ್ರಿ ಸರಕಾರ ವರ್ಗಾವಣೆ ದಂಧೆ ಮಾಡಿರುವುದಾಗಿ ದೂರಿದ್ದ ಯಡಿಯೂರಪ್ಪ ಪಟಾಲಂ, ಈಗ ಜೈಲಿಗೆ ಹೋಗಿ ಬಂದ ತಹಶೀಲ್ದಾರ್‌ರನ್ನು ಯಲಹಂಕಗೆ ಪೋಸ್ಟಿಂಗ್ ಮಾಡಿದೆ. ಇದಕ್ಕಾಗಿ ಎಷ್ಟು ಹಣ ನಿಗದಿಪಡಿಸಿ ತಹಶೀಲ್ದಾರ್‌ನಿಂದ ಲೂಟಿ ಮಾಡಿದೆ ಎಂಬುದನ್ನು ಹೇಳಲಿ ಎಂದರು.

ಫೋನ್ ಕದ್ದಾಲಿಕೆಯ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸುವ ಮುಕ್ತ ಅಧಿಕಾರ ರಾಜ್ಯ ಸರಕಾರಕ್ಕೆ ಇದೆ. ಇದರ ಬಗ್ಗೆ ವೈಯ್ಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ. ಕಳೆದ 14 ತಿಂಗಳ ನನ್ನ ಆಡಳಿತದಲ್ಲಿ ಯಾವುದೇ ಸೂಚನೆಯನ್ನು ಮುಖ್ಯಮಂತ್ರಿಯಾಗಿ ನೀಡದಿರುವಾಗ ನಾನು ಯಾಕೆ ಭಯಪಡಬೇಕು ಎಂದು ಅವರು ಪ್ರಶ್ನಿಸಿದರು.

ಈ ವಿಚಾರದಲ್ಲಿ ಕೆಲವು ಟಿವಿ ಮಾಧ್ಯಮಗಳು ಕುಮಾರಸ್ವಾಮಿಯನ್ನು ಹತ್ತಿಕ್ಕಲು ಯಡಿಯೂರಪ್ಪಗೆ ಇದೊಂದು ಅಸ್ತ್ರ ಎಂದು ಸುದ್ದಿ ಮಾಡುತ್ತಿದೆ. ಆದರೆ ಯಾವ ಅಸ್ತ್ರವೂ ಇಲ್ಲ, ಎಲ್ಲ ಅಸತ್ತ ನಿಶ್ಯಸ್ತ್ರ ಆಗಿ ಹೋಗುತ್ತದೆ. ಕೆಲವು ಮಾಧ್ಯಮಗಳು ನನ್ನ ವಿರುದ್ಧ ಸುಳ್ಳು ಹೇಳಲು ಹೊರಟಿವೆ. ಆದರೆ ಅವರಿಗೆ ಅದರಲ್ಲಿ ಯಾವುದೇ ಫಲ ಸಿಗಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದ್ದೇನೆ ಎಂದರು.

ರಾಜ್ಯ ನೆರೆಯಿಂದಾಗಿ ಸಂಕಷ್ಟದಲ್ಲಿರುವಾಗ ಸರಕಾರದ ನಡವಳಿಕೆಯನ್ನು ಟೀಕೆ ಮಾಡಿದರೆ ಸಂತ್ರಸ್ತರಿಗೆ ಪರಿಹಾರ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅನಾಹುತ ಸರಿಪಡಿಸುವ ನಿಟ್ಟಿನಲ್ಲಿ ಒಕ್ಕೊರಲಿನಿಂದ ಕೆಲಸ ಮಾಡಬೇಕಾಗಿದೆ. ಆತಂಕದಲ್ಲಿರುವ ಸಂತ್ರಸ್ತರಿಗೆ ವಿಶ್ವಾಸ ಮೂಡಿಸಿ ಹೊಸ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಅವರು ಹೇಳಿದರು.

ಕೇಂದ್ರ ನಾಯಕರು ರಾಜ್ಯ ಪ್ರವಾಸ ಮಾಡಿದರೂ ಈವರೆಗೆ ಯಾವುದೇ ನೆರವು ನೀಡಿಲ್ಲ. ಈ ಹಿಂದೆ ಇದ್ದ ಯುಪಿಎ ಸರಕಾರ ಆಗ ಸಂಭವಿಸಿದ ನೆರೆಯ ಪರಿಹಾರಕ್ಕಾಗಿ ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಈಗ ಇರುವ ಬಿಜೆಪಿ ಕೇಂದ್ರ ಸರಕಾರ ಒಂದು ಬಿಡಿಗಾಸು ಬಿಡುಗಡೆ ಮಾಡಿಲ್ಲ. ಅವರಿಗೆ ಈ ಕರ್ನಾಟಕದ ಬಗ್ಗೆ ಎಷ್ಟು ಗೌರವ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಆದುದರಿಂದ ಇಂತಹ ಪರಿಸ್ಥಿತಿ ಕೇಂದ್ರ ಹಾಗೂ ರಾಜ್ಯ ಸರಕಾರ ತಕ್ಷಣವೇ ಸ್ಪಂದಿಸಿ ನೆರವು ಒದಗಿಸೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೆಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News