ಮಂಗಳೂರು: ನಂಬರ್ ಪ್ಲೇಟ್ ರಹಿತ ಅನುಮಾನಾಸ್ಪದ ವಾಹನ ಪತ್ತೆ

Update: 2019-08-18 16:12 GMT

ಮಂಗಳೂರು, ಆ.18: ಕೇಂದ್ರ ಸರಕಾರದ ಅಪರಾಧ ತನಿಖಾ ಸಂಸ್ಥೆಯ ನಕಲಿ ನಂಬರ್ ಪ್ಲೇಟ್ ಮತ್ತು ಚಿಹ್ನೆ ಬಳಸಿ ದರೋಡೆಗೆ ಸಂಚು ರೂಪಿಸಿದ ಪ್ರಕರಣದ ಬೆನ್ನಿಗೇ ನಗರದ ಪೊಲೀಸರು ಶನಿವಾರ ಸಂಜೆ ಶಂಕಾಸ್ಪದ ನಂಬರ್ ಪ್ಲೇಟ್ ಇರುವ ಇನ್ನೊಂದು ವಾಹನವನ್ನು ಪತ್ತೆ ಹಚ್ಚಿದ್ದು, ತನಿಖೆ ನಡೆಯುತ್ತಿದೆ.

ಈ ವಾಹನಕ್ಕೆ ಪಂಜಾಬ್ ರಾಜ್ಯದ ನಂಬರ್ ಪ್ಲೇಟ್ ಅಳವಡಿಸಲಾಗಿದ್ದು, ಭಾರತ ಸರಕಾರ ಎಂದು ಬರೆಯಲಾಗಿದೆ. ವಾಹನದಲ್ಲಿ ಚಾಲಕ ಸೇರಿದಂತೆ ಇಬ್ಬರು ಇದ್ದರು ಎನ್ನಲಾಗಿದೆ.

ನಗರದಲ್ಲಿ ಹೈ ಅಲರ್ಟ್ ಹಿನ್ನೆಲೆಯಲ್ಲಿ ವ್ಯಾಪಕ ವಾಹನ ತಪಾಸಣೆ ನಡೆಯುತ್ತಿದ್ದು, ಶುಕ್ರವಾರ ಸಂಜೆ ಈ ಪಂಜಾಬ್ ರಾಜ್ಯದ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಹೊಂದಿದ್ದ ಕಾರು ಓಡಾಡುತ್ತಿರುವುದು ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿತ್ತು.

ಟ್ರಾಫಿಕ್ ಪೊಲೀಸರು ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ನಂಬರ್ ಪ್ಲೇಟ್ ಸಂಶಯಾಸ್ಪದವಾಗಿ ಕಂಡು ಬಂದಿದ್ದು, ಹೆಚ್ಚಿನ ತನಿಖೆಗಾಗಿ ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಇನ್ನೂ ಪೂರ್ತಿಗೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News