ಕಲಿಯುಗದಲ್ಲಿ ಶ್ರೀಕೃಷ್ಣನ ಸಂದೇಶ ಪಾಲನೆ ಅಗತ್ಯ: ಕುಮಾರಸ್ವಾಮಿ

Update: 2019-08-18 16:19 GMT

ಉಡುಪಿ, ಆ.18: ದೇಶದಲ್ಲಿ ಧರ್ಮ ಸಂಸ್ಥಾಪನ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕೃಷ್ಣ ಸಂದೇಶವನ್ನು ಈ ಕಲಿಯುಗದಲ್ಲಿ ಎಲ್ಲರೂ ಪಾಲಿಸ ಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪರ್ಯಾಯ ಪಲಿಮಾರು ಮಠ ಶ್ರೀಕೃಷ್ಣಮಠದ ಆಶ್ರಯದಲ್ಲಿ ರವಿವಾರ ರಾಜಾಂಗಣದಲ್ಲಿ ಆಯೋಜಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು.

ಅಂತಿಮವಾಗಿ ಧರ್ಮಕ್ಕೆ ಜಯ ಎಂಬುದನ್ನು ಪುರಾಣದಲ್ಲಿ ಮಾತ್ರವಲ್ಲದೆ ಇಂದಿನ ರಾಜಕೀಯ ಸನ್ನಿವೇಶದಲ್ಲೂ ನೋಡುತ್ತಿದ್ದೇವೆ. ಹಿಂದು ಸಂಸ್ಕೃತಿ ಅತ್ಯಂತ ವಿಶಿಷ್ಟತೆಯನ್ನು ಹೊಂದಿರುವ ಸಂಸ್ಕೃತಿಯಾಗಿದೆ. ಶ್ರೀಕೃಷ್ಣಾಷ್ಟಮಿ ಹಬ್ಬದ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿರುವ ಸಣ್ಣ ಮಕ್ಕಳಲ್ಲೂ ಕೃಷ್ಣನ ರೂಪ ನೋಡುವ ಮೂಲಕ ಭಕ್ತಿಯನ್ನು ಸಾದಾರ ಪಡಿಸುತ್ತಿದ್ದೇವೆ.

ಇಂದು ಎಲ್ಲ ಕಡೆ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪದಂತಹ ಸಮಸ್ಯೆ ಗಳಿಗೆ ಶ್ರೀಕೃಷ್ಣ ರಕ್ಷಣೆ ಅಗತ್ಯವಾಗಿದೆ. ನಾಡಿನಲ್ಲಿ ಸಂಭವಿಸಿರುವ ಪ್ರವಾಹದಿಂದ ಜನತೆಯನ್ನು ದೇವರು ರಕ್ಷಿಸಬೇಕಾಗಿದೆ. ನಾಡಿಗೆ ಒದಗಿರುವ ಸಂಕಷ್ಟವನ್ನು ಶ್ರೀಕೃಷ್ಣ ಪರಿಹರಿಸಿಕೊಡೇಕು ಎಂದು ಅವರು ಪ್ರಾರ್ಥಿಸಿದರು.

ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಸಾ.ರಾ.ಮಹೇಶ್, ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಂಗಳೂರು ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಇತಿಹಾಸ ತಜ್ಞ ಪ್ರೊ.ಪಾದೂರು ಶ್ರೀಪತಿ ತಂತ್ರಿ, ಕಲಾವಿದರಾದ ಶಮಾ ಕೃಷ್ಣ, ದುರ್ಗಾಂಬಾ ಮೋಟಾರ್ಸ್‌ನ ಕೃಷ್ಣಾನಂದ ಚಾತ್ರ, ನಿಟ್ಟೆ ವಿದ್ಯಾಲಯದ ಡಾ.ಅನಂತಪದ್ಮನಾಭ ಆಚಾರ್ಯ, ಹಾರಾಡಿ ಜಿ.ಎಂ. ವಿದ್ಯಾನಿಕೇತನ ಟ್ರಸ್ಟ್‌ನ ಪ್ರಕಾಶ್ಚಂದ್ರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಡಾ.ವಿಜಯೇಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೆಂಗಳೂರು ಶಮಾಕೃಷ್ಣ ಮತ್ತು ಶ್ರದ್ಧಾ ಅವರಿಂದ ಸರ್ವಂ ಕೃಷ್ಣಮಯಂ ಭರತ ನಾಟ್ಯ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News