ಪಣಿಯಾಡಿ ಪ್ರಶಸ್ತಿಗೆ ಅಕ್ಷತರಾಜ್ ಪೆರ್ಲ-ರಾಜಶ್ರೀ ರೈ ಪೆರ್ಲ ಆಯ್ಕೆ

Update: 2019-08-18 16:44 GMT
ಅಕ್ಷತರಾಜ್ ಪೆರ್ಲ, ರಾಜಶ್ರೀ ರೈ ಪೆರ್ಲ

ಉಡುಪಿ, ಆ.18: ಉಡುಪಿ ತುಳುಕೂಟದ 25ನೆ ವರ್ಷದ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಯುವ ಸಾಹಿತಿಗಳಾದ ಅಕ್ಷತರಾಜ್ ಪೆರ್ಲ ಅವರ ‘ಬೊಳ್ಳಿ’ ಹಾಗೂ ರಾಜಶ್ರೀ ಟಿ.ರೈ ಪೆರ್ಲಅವರ ‘ಚೌಕಿ’ ಕಾದಂಬರಿ ಆಯ್ಕೆಯಾಗಿದೆ.

ತುಳು ಚಳವಳಿಯ ಪ್ರವರ್ತಕ ದಿ.ಎಸ್.ಯು.ಪಣಿಯಾಡಿ ಅವರ ನೆನಪಿನಲ್ಲಿ ನೀಡುವ ಈ ಪ್ರಶಸ್ತಿಯು ನಗದು ಸಹಿತ ಶಾಶ್ವತ ಫಲಕವನ್ನೊಳಗೊಂಡಿದೆ. ಮಂಗಳೂರು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿರುವ ಅಕ್ಷತ ರಾಜ್ ಪೆರ್ಲ ಅಕ್ಷರ ಎಂಬ ಕಾವ್ಯನಾಮದೊಂದಿಗೆ ಅನೇಕ ಕತೆ, ಕವನಗಳನ್ನು ಬರೆದು ಕನ್ನಡ, ತುಳು ಸಾಹಿತ್ಯ ಲೋಕದಲ್ಲಿ ಹೆಸರುಗಳಿಸಿದ್ದಾರೆ. ಕಲಾವಿದೆಯಾಗಿ., ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ.

ರಾಜಶ್ರೀ ಟಿ.ರೈ ಪೆರ್ಲ ಗೃಹಿಣಿಯಾಗಿದ್ದು, ತುಳು, ಕನ್ನಡ ಹಾಗೂ ಹವಿ ಗನ್ನಡ ಭಾಷೆಯಲ್ಲಿ ಕತೆ, ಕವನ, ನಾಟಕ ಕಾದಂಬರಿ ಬರೆದು ಹೆಸರಾಗಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ಬರೆದ ಅನೇಕ ಸ್ವಂತ ಹಾಗೂ ಅನುವಾದಿತ ಕೃತಿಗಳು ಪ್ರಕಟಗೊಂಡಿವೆ.

ಪ್ರಶಸ್ತಿಯ ತೀರ್ಪುಗಾರರಾಗಿ ಸಾಹಿತಿಗಳಾದ ಪುತ್ತಿಗೆ ಪದ್ಮನಾಭ ರೈ, ಗಂಗಾಧರ್ ಕಿದಿಯೂರು, ತಾರಾ ಆಚಾರ್ಯ ಕಲ್ಮಂಜೆ ಸಹಕರಿಸಿದ್ದರು. ಸೆ.15ರಂದು ಉಡುಪಿ ಕಿದಿಯೂರು ಹೊಟೇಲ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಹಾಗೂ ಪ್ರಶಸ್ತಿ ಸಮಿತಿ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News