35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರವೀಂದ್ರ ರೈ ಅವರಿಗೆ ಅಭಿನಂದನಾ ಕಾರ್ಯಕ್ರಮ

Update: 2019-08-19 12:12 GMT

ಕೊಣಾಜೆ: ಶಿಕ್ಷಕ ವೃತ್ತಿ ಉಳಿದ ವೃತ್ತಿಗಿಂತ ವಿಭಿನ್ನವಾದುದು ಮತ್ತು ಅತ್ಯಂತ ಸೂಕ್ಷ್ಮವಾದುದು. ಇಂತಹ ವೃತ್ತಿಯನ್ನು ರವೀಂದ್ರ ರೈ ಕಳೆದ ಮೂವತ್ತೈದು ವರ್ಷದಿಂದ ಅತ್ಯಂತ ಬದ್ಧತೆಯೊಂದಿಗೆ ನಿರ್ವಹಿಸಿಕೊಂಡು ಬಂದು ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಹೇಳಿದರು.

ಅವರು ರವಿವಾರ ಸಾರ್ವಜನಿಕ ಅಭಿನಂದನಾ ಸಮಿತಿ ಕೊಣಾಜೆ ಇದರ ವತಿಯಿಂದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತಗೊಂಡಿರುವ ರವೀಂದ್ರ ರೈ ಅವರ ಅಭಿನಂದಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು.

ವಿದ್ಯೆ ಎಂಬುದೊಂದು ಇದ್ದರೆ ಬದುಕಿನಲ್ಲಿ ಕತ್ತಲೆ ಇರುವುದಿಲ್ಲ. ಆದ್ದರಿಂದ ವಿದ್ಯೆಯೆಂಬುದು ಪ್ರತಿಯೊಬ್ಬರಿಗೂ ಶ್ರೇಷ್ಠವಾದುದು. ರವೀಂದ್ರ ರೈ ಅವರು ತಮ್ಮ ಅದ್ಯಾಪನ ವೃತ್ತಿಯೊಂದಿಗೆ ಮೌಲ್ಯಗಳ ಹಂಚಿಕೊಳ್ಳುವಿಕೆ,  ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದರೊಂದಿಗೆ ಮಾದರಿ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅವರ ಪಾತ್ರ ಪ್ರಮುಖವಾದುದು. ರವೀಂದ್ರ ರೈ ಅವರು ಬದುಕು ಮತ್ತು ಆಚರಣೆಯಲ್ಲಿ ಏಕತೆಯನ್ನು ಪಾಲಿಸಿಕೊಂಡು ಬಂದವರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಯಾರು ನಿತ್ಯ ವಿದ್ಯಾರ್ಥಿಯಾಗಿರುತ್ತಾನೋ ಅವನೇ ಆದರ್ಶ ಶಿಕ್ಷಕನಾಗುತ್ತದೆ. ಈ ಮಾತು ರವೀಂದ್ರ  ರೈ ಅವರಿಗೆ ನಿಜವಾಗಿಯೂ ಒಪ್ಪುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಶಿಕ್ಷಣದ ಗುಣಮಟ್ಟ ಕುಸಿದಿದೆ. ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಿವೃತ ಪ್ರಾಧ್ಯಾಪಕ ಡಾ.ಪಿ.ಅನಂತಕೃಷ್ಣ ಭಟ್ ಅವರು ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್, ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್, ಮಾಜಿ ಮಂಡಲ ಪ್ರಧಾನರಾದ ಇಬ್ರಾಹಿಂ ಕೋಡಿಜಾಲ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಪೆರ್ಮನ್ನೂರು ಚರ್ಚ್‍ನ ಧರ್ಮಗುರು ಫಾ.ಜೆ.ಪಿ.ಸಲ್ದಾನ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಅಭಿನಂದನಾ ಸಮಿತಿ ಅಧ್ಯಕ್ಷರಾದ ಪ್ರೊ.ಪಿ.ಎಲ್.ಧರ್ಮ, ಗೌರವಸಲಹೆಗಾರ ರಘುರಾಮ ಕಾಜವ ಪಟ್ಟೋರಿ, ಗೌರವಾಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಕೋಶಾಧಿಕಾರಿ ಸುದರ್ಶನ ಭಟ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್, ತ್ಯಾಗಂ ಹರೇಕಳ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News