ಕೊಡಗು ಮಾದರಿಯಲ್ಲಿ ದ.ಕ. ಜಿಲ್ಲೆಗೂ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿ: ರಮಾನಾಥ ರೈ

Update: 2019-08-19 12:19 GMT

ಬಂಟ್ವಾಳ, ಆ. 19: ಪ್ರಾಕೃತಿಕ ವಿಕೋಪದಿಂದ ದ.ಕ. ಜಿಲ್ಲೆಯಲ್ಲೂ ವ್ಯಾಪಕ ಹಾನಿಯಾಗಿದ್ದು, ರಾಜ್ಯ ಸರಕಾರವು ಕೊಡಗು ಮಾದರಿಯಲ್ಲಿ ದ.ಕ. ಜಿಲ್ಲೆಗೂ ವಿಶೇಷ ಅನುದಾನದ ಪ್ಯಾಕೇಜ್ ಘೋಷಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಅವರು ಸೋಮವಾರ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಸ್ಥಳಗಳನ್ನು ಕೆಪಿಸಿಸಿ ನಿಯೋಗವು ಪರಿಶೀಲನೆ ನಡೆಸಿದೆ. ಈ ಪೈಕಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಹಾನಿ ಪ್ರಕರಣಗಳು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದರು. 

ತುರ್ತು ಪರಿಹಾರ ನೀಡಲು ಸರಕಾರ ಗಮನಹರಿಸಿಲ್ಲ. ಕೇಂದ್ರದ ಪರಿಹಾರ ಇನ್ನೂ ಘೋಷಣೆ ಆಗಿಲ್ಲ. ಯಡಿಯೂರಪ್ಪ ಅವರು ಹಿಂದೆ ಸಿಎಂ ಆಗಿದ್ದ ಸಂದರ್ಭ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ 2 ಸಾವಿರ ಕೋಟಿ ರೂ. ಪರಿಹಾರ ಕ್ರಮವಾಗಿ ಘೋಷಿಸಿದ್ದರು. ಈ ಬಾರಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದರೂ ಕರ್ನಾಟಕಕ್ಕೆ ಸಮರ್ಪಕ ಪರಿಹಾರ ದೊರಕಿಲ್ಲ ಎಂದು ಆಪಾದಿಸಿದ ಅವರು, ಪಶ್ಚಿಮ ಘಟ್ಟ ಉಳಿವಿಗೆ 78 ಸಾವಿರ ಹೆಕ್ಟೇರ್ ಹಸಿರು ಹೊದಿಕೆಯ ಕಾರ್ಯ ತನ್ನ ಅವಧಿಯಲ್ಲಿ ನಡೆಯಿತು ಎಂದು ರೈ ಹೇಳಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಈ ಬಾರಿಯ ಮಳೆ ರಾಜ್ಯದ ಜನ ಜೀವನವನ್ನು ಅಸ್ಥಿರಗೊಳಿಸಿದೆ. ಕೃಷಿ ಭೂಮಿಯೂ ಸಂಪೂರ್ಣವಾಗಿ ನಾಶವಾಗಿದ್ದು, ಇದೀಗ ಅತಂತ್ರದ ಬದುಕು ಎದುರಾಗಿದೆ. ಮುಖ್ಯಮಂತ್ರಿಯವರು ರಾಜ್ಯದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಅದೇ ಮಾದರಿಯಲ್ಲಿ ಪ್ರಧಾನಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ತುರ್ತಾಗಿ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿದರು. ಮುಖ್ಯಮಂತ್ರಿ ಅವರು ಹತ್ತು ಸಾವಿರ ರೂ. ಘೋಷಣೆ ಮಾಡಿದ್ದಾರೆ. ಆದರೆ, 2, 3ಸಾವಿರ ರೂ. ನೀಡಿರುವ ಸಮೀಕ್ಷೆಯಿಂದ ತಿಳಿದುಬಂದಿದ್ದು, ನಿಗದಿ ಮಾಡಿದ ಪರಿಹಾರದ ಮೊತ್ತ ನೀಡಿಲ್ಲ ಎಂದು ಅವರು ಅಪಾದಿಸಿದರು.

ಜಿಪಂ, ತಾಪಂಗಳು ಸಕಾಲದಲ್ಲಿ ಸಹಕಾರ ನೀಡಬೇಕು. ಪ್ರಧಾನಿ ಬಂದು ಇಲ್ಲಿ ವೈಮಾನಿಕಕ ಸಮೀಕ್ಷೆ ಮಾಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಜಯಂತಿ ಪುಜಾರಿ, ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News