ಡಿಗ್ರೂಪ್ ನೌಕರರಿಗೆ 4 ತಿಂಗಳ ವೇತನ ಬಾಕಿ: ಬಂಟ್ವಾಳದಲ್ಲಿ ನೌಕರರಿಂದ ಧರಣಿ

Update: 2019-08-19 13:23 GMT

ಬಂಟ್ವಾಳ, ಆ.19: ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಡಿಗ್ರೂಪ್ ನೌಕರರು ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಡಾ. ಸದಾಶಿವ ಕಚೇರಿ ಮುಂದೆ ಸೋಮವಾರ ದಿಢೀರನೆ ಧರಣಿ ನಡೆಸಿದರು.

ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದೆ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಡಿಗ್ರೂಪ್ ನೌಕರರು ಧರಣಿ ನಡೆಸಿದರು. ಸರಿಯಾಗಿ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ನಾವು ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದರೂ ನಮ್ಮ ಮನೆಮಂದಿಗೆ ಅನಾರೋಗ್ಯ ಬಾಧಿಸಿದಾಗ ಔಷಧಿಗೂ ನಮ್ಮಲ್ಲಿ ಹಣವಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ ಮನೆಯಲ್ಲಿಯೇ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಧರಣಿನಿರತರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಈಗಾಗಲೇ ಬಂಟ್ವಾಳ ಶಾಸಕರು, ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತರು, ಆರೋಗ್ಯ ಇಲಾಖೆಯ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಧರಣಿ ನಡೆಸಲು ಮುಂದಾಗಿದ್ದು, ವೇತನ ಸಿಗುವವರೆಗೂ ಮುಂದುವರೆಸುವುದಾಗಿ ಧರಣಿನಿರತರು ತಿಳಿಸಿದ್ದಾರೆ. ಡಿಗ್ರೂಪ್ ನೌಕರರ ಧರಣಿಯಿಂದಾಗಿ ಬಂಟ್ವಾಳ ಆಸ್ಪತ್ರೆಗೆ ಬಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು.

ತಾಲೂಕು ವೈದ್ಯಾಧಿಕಾರಿ ಡಾ.ಸದಾಶಿವ ಅವರು ವೇತನ ತೆಗೆಸಿಕೊಡುವ ಭರವಸೆಯ ಮೇರೆಗೆ ಮಧ್ಯಾಹ್ನದ ಹೊತ್ತಿಗೆ ನೌಕರರು ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡರು. ಮಂಗಳವಾರದಿಂದ ವೇತನ ಪಾವತಿಯಾಗದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆಯನ್ನು ಡಿಗ್ರೂಪ್ ನೌಕರರು ನೀಡಿದ್ದಾರೆ.

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು 15 ಮಂದಿ ಡಿಗ್ರೂಪ್ ನೌಕರರು ಗುತ್ತಿಗೆಯಾಧಾರದಲ್ಲಿ ಕೆಲಸಮಾಡುತ್ತಿದ್ದು, ಶಿವಮೊಗ್ಗದ ವ್ಯಕ್ತಿಯೊಬ್ಬರು ಇವರ ಗುತ್ತಿಗೆ ವಹಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಈ ನೌಕರರಿಗೆ ವೇತನ ಪಾವತಿಯಾಗದೆ ಸಂಕಷ್ಟದಲ್ಲಿದ್ದು, ಲೋಕಯುಕ್ತರು, ಶಾಸಕರು, ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇವರ ಈ ಸಮಸ್ಯೆ ಮಾತ್ರ ಇನ್ನು ಪರಿಹಾರವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News