ಗುಡ್ಡ ಕುಸಿತ: ತೋಟ ಗದ್ದೆಗಳಿಗೆ ನುಗ್ಗಿದ ನೀರು

Update: 2019-08-19 13:48 GMT

ಪುತ್ತೂರು: ಗುಡ್ಡವೊಂದು ಕುಸಿತಗೊಂಡು ಪಕ್ಕದಲ್ಲಿ ಹರಿಯುತ್ತಿದ್ದ ತೊರೆಯ ನೀರು ತೋಟ ಗದ್ದೆಗಳಿಗೆ ಹರಿದು ತೊಂದರೆ ಉಂಟಾದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. 

ಇಲ್ಲಿನ ಪಾಂಗಲಾಯಿ ಬೈಲು ಪ್ರದೇಶ ಮತ್ತು ವಸತಿ ಪ್ರದೇಶದಲ್ಲಿ ಗುಡ್ಡ ಕುಸಿತ ಮತ್ತು ಕಣಿಯೊಂದರ ತಡೆಗೋಡೆ ಕುಸಿದ ಪರಿಣಾಮವಾಗಿ ತೊರೆಯ ನೀರಿನ ಹರಿಯುವಿಕೆಗೆ ಸಮಸ್ಯೆ ಉಂಟಾಗಿದ್ದು, ಪಕ್ಕದ ಗದ್ದೆ, ತೋಟ ಪ್ರದೇಶದಲ್ಲೆಲ್ಲ ನೀರು ತುಂಬಿದೆ.

ಪಾಂಗಲಾಯಿ ಬೈಲು ಪ್ರದೇಶಕ್ಕೆ  ದರ್ಬೆ ವೃತ್ತದ ಬಳಿಯಿಂದ ಮತ್ತು ಬೆಥನಿ ಶಾಲೆ ಕಡೆಯಿಂದ ಬರುವ ತೋಡಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ.  ಬೈಲಿನ ಉತ್ತರ  ಕಡೆಯ ಗುಡ್ಡ 30 ಮೀಟರ್‍ನಷ್ಟು ಉದ್ದಕ್ಕೆ ಕುಸಿದಿದೆ. ಇದರಿಂದ ತೋಡು ಮುಚ್ಚಿದಂತಾಗಿದೆ. ಇಲ್ಲಿನ ಹಲವು ಮನೆಗಳಿಗೆ ಪತ್ರಾವೋ ಆಸ್ಪತ್ರೆ ಕಡೆಯಿಂದ ಹೋಗುವ ದಾರಿ ಮುಚ್ಚಿದೆ. ಹರಿಯಲಾಗದ ನೀರು ಈಗ ದಕ್ಷಿಣ ದಿಕ್ಕಿನ ಕಣಿಯಲ್ಲಿ ಹರಿಯುತ್ತಿದೆ. ನೀರು ಸಂಗ್ರಹಗೊಂಡ ಕಾರಣ ಇಲ್ಲಿನ ಖಾಸಗಿ ಗದ್ದೆ ಕೆರೆಯಂತಾಗಿದೆ. ಸಂಗ್ರಹಗೊಂಡ ನೀರಿನ ಒತ್ತಡದಿಂದಾಗಿ ಕಣಿಯೊಂದರ ತಡೆಗೋಡೆ ಕುಸಿದಿದೆ. 

ಈ ಬಗ್ಗೆ ಸ್ಥಳೀಯ ನಿವಾಸಿಗಳು ನಗರಸಭೆಗೆ ಮನವಿ ಮಾಡಿದ್ದಾರೆ. ಪುತ್ತೂರು ಬಸ್ ನಿಲ್ದಾಣದ ಕೆಳಗಿನ ಮುಖ್ಯರಸ್ತೆಯಿಂದ ಬರುವ ಪಾಂಗಲಾಯಿ ರಸ್ತೆಯಲ್ಲಿ ಕವಲೊಡೆದ ಕಾಲುದಾರಿ ಮುಚ್ಚಿ ಹೋಗಿದೆ. ವಿಮಲಾ ಎಂಬವರ ಮನೆಗೆ ಅಪಾಯದಲ್ಲಿದೆ. ಇಲ್ಲಿನ ನಾಗ ಸಾನಿಧ್ಯವೊಂದರ ಪಕ್ಕದ ತಡೆಗೋಡೆ ನಾಶವಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಹೆಚ್ಚಿನ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News