ನನ್ನ ಫೋನ್ ಕದ್ದಾಲಿಕೆ ಆದರೂ ಸಮಸ್ಯೆಯಿಲ್ಲ: ಶೋಭಾ ಕರಂದ್ಲಾಜೆ

Update: 2019-08-19 14:34 GMT

ಉಡುಪಿ, ಆ.19: ಫೋನ್ ಕದ್ದಾಲಿಕೆ ಯಾರು ಮಾಡಿದರೂ ಕೂಡ ತಪ್ಪು. ತನಿಖೆಯಿಂದ ಎಲ್ಲ ಸತ್ಯಾಂಶವೂ ಹೊರಬರಲಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಕುಮಾರಸ್ವಾಮಿ ಏನೂ ಮಾಡಿಲ್ಲದಿದ್ದರೆ ಖುಷಿಯಾಗಿರಲಿ. ತಪ್ಪು ಮಾಡಿಲ್ಲದಿದ್ದರೆ ಇವರಿಗೆ ಅಪರಾಧಿ ಭಾವನೆ ಯಾಕೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಕದ್ದಾಲಿಕೆ ಬಗ್ಗೆ ತನಿಖೆ ಆಗಬೇಕೆಂಬ ಅಪೇಕ್ಷೆ ಇತ್ತು. ಯಾರು ಹೇಗೆ ತನಿಖೆ ಮಾಡುತ್ತಾರೆ ಎಂಬುದು ಶೀಘ್ರವೇ ಗೊತ್ತಾಗಲಿದೆ. ಯಾರೂ ತಪ್ಪುಮಾಡಿಲ್ಲದಿದ್ದರೆ ಇಡೀ ರಾಜ್ಯವೇ ಖುಷಿ ಪಡುತ್ತದೆ ಎಂದು ಅವರು ತಿಳಿಸಿದರು.

ನನ್ನ ಫೋನ್ ಕದ್ದಾಲಿಕೆ ಆದರೂ ಸಮಸ್ಯೆಯಿಲ್ಲ. ಯಾಕೆಂದರೆ ನಾನು ಸಮಾಜದ್ರೋಹ, ದೇಶದ್ರೋಹದ ಕೆಲಸ ಮಾಡಿಲ್ಲ. ಸಂಸದೆಯಾಗಿ ಸಂತೋಷದಿಂದಿರುವ ನಾನು ರಾಜ್ಯ ರಾಜಕಾರಣ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಯಡಿಯೂರಪ್ಪ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ನನ್ನದೇ ಕೆಲಸದಲ್ಲಿದ್ದೇನೆ. ನೆರೆ ಪ್ರವಾಸ, ಪಾರ್ಲಿಮೆಂಟ್ ಓಡಾಟದಲ್ಲಿದ್ದೇನೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಮುಖ್ಯಮಂತ್ರಿ ಪಟ್ಟಿಯನ್ನು ಹೈಕಮಾಂಡಿಗೆ ಒಪ್ಪಿಸಿದ್ದಾರೆ. ಯಾರು ಸಚಿವರಾಗುತ್ತಾರೆಂಬ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ನಾಳೆ ಪ್ರಮಾಣವಚನದೊಳಗೆ ಪಟ್ಟಿ ಬರಲಿದೆ. ನೆರೆ ಪರಿಹಾರದ ಅಧ್ಯಯನ ತಂಡ ಯಾವಾಗ ಬೇಕಾದರೂ ರಾಜ್ಯಕ್ಕೆ ಬರಬಹುದು. ಈಗಾಗಲೇ ಗೃಹ ಸಚಿವರು, ಹಣಕಾಸು ಸಚಿವರು ರಾಜ್ಯಕ್ಕೆ ಬಂದು ಹೋಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News