ಉಡುಪಿ ಪಂಚರತ್ನ ಸೇವಾ ಟ್ರಸ್ಟ್ ಉದ್ಘಾಟನೆ

Update: 2019-08-19 15:05 GMT

ಉಡುಪಿ, ಆ.19: ಸಮಾಜ ಸೇವೆಯ ಉದ್ದೇಶದಿಂದ ಆರಂಭಿಸಲಾಗಿರುವ ಉಡುಪಿ ಪಂಚರತ್ನ ಸೇವಾ ಟ್ರಸ್ಟ್‌ನ ಉದ್ಘಾಟನೆಯನ್ನು ಉದ್ಯಾವರ ಹಾಜಿ ಅಬ್ದುಲ್ಲ ಜಲೀಲ್ ಸೋಮವಾರ ಉಡುಪಿಯ ಟಿ.ಎ.ಪೈ. ಹಿಂದಿ ಭವನದಲ್ಲಿ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ದೀನದಲಿತರ ಸೇವೆ, ಬಡವರ ಕಣ್ಣೀರು ಒರೆಸುವ ಕಾರ್ಯವನ್ನು ಈ ಟ್ರಸ್ಟ್ ಮಾಡಬೇಕು. ಪಂಚರತ್ನ ಟ್ರಸ್ಟ್‌ಗೆ ನಮ್ಮ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.

ಟ್ರಸ್ಟ್‌ನ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಉದ್ಯಮಿ ಕೆ.ರಂಜನ್ ಕಲ್ಕೂರ, ಇಂತಹ ಟ್ರಸ್ಟ್‌ಗಳು ಇಲ್ಲದವರು ಮತ್ತು ಉಳ್ಳವರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಸೇವೆ ಎಂಬುದು ಎಲ್ಲರಿಗೂ ದೊರೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಒಳಕಾಡು ಮಾತನಾಡಿ, ಟ್ರಸ್ಟ್ ಮುಂದಿನ ದಿನಗಳಲ್ಲಿ ಹಲವಾರು ಉಚಿತ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ನಿರಾಶ್ರಿತರಿಗೆ ಉಚಿತ ಆರೈಕೆ ಕೇಂದ್ರ, ಉಚಿತ ವಿದ್ಯುತ್ ಚಾಲಿತ ಶವ ದಹನ ಕೇಂದ್ರ, ಉಚಿತ ವಿದ್ಯುತ್ ಚಾಲಿತ ಶವಗಾರ, ಮಕ್ಕಳನ್ನು ದತ್ತು ಪಡೆಯುವ ಮತ್ತು ಕೃಷಿ ಪುನಶ್ಚೇತನ ಯೊೀಜನೆಗಳು ಮುಖ್ಯವಾಗಿವೆ ಎಂದರು.

ಅಧ್ಯಕ್ಷತೆಯನ್ನು ಮುಂಬೈಯ ಉದ್ಯಮಿ ರವಿ ದೇವಾಡಿಗ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಯುಬಿಎಂ ಚರ್ಚ್ ಬೋರ್ಡ್ ಮತ್ತು ಟ್ರಸ್ಟ್ ಅಸೋಸಿಯೇಶನ್‌ನ ದಾನಂದ ಕಾಂಚನ್ ಮಾತನಾಡಿದರು.

ವೇದಿಕೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು, ಉಪಾಧ್ಯಕ್ಷ ತಾರನಾಥ ಮೇಸ್ತ, ಕೋಶಾಧಿಕಾರಿ ಪಲ್ಲವಿ ಸಂತೋಷ್, ಸಹ ಕಾರ್ಯದರ್ಶಿ ಯತೀಶ್ ತಿಂಗಳಾಯ ಉಪಸ್ಥಿತರಿದ್ದರು. ನಾಗರಾಜ್ ವರ್ಕಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News