ಕೊನೆಗೂ ದಾರಿ ದೀಪ ಅಳವಡಿಕೆಗೆ ಮುಂದಾದ 34 ನೆಕ್ಕಿಲಾಡಿ ಗ್ರಾ.ಪಂ.

Update: 2019-08-19 16:40 GMT

ಉಪ್ಪಿನಂಗಡಿ: ದಾರಿ ದೀಪ ಸಮಸ್ಯೆಯಿಂದ ಬೇಸತ್ತು ಸುಮಾರು ಒಂದು ವರ್ಷದಿಂದ ಮನವಿ, ಪ್ರತಿಭಟನೆ ಹೀಗೆ ಗ್ರಾಮಸ್ಥರರಿಂದ ಹಲವು ಆಕ್ರೋಶದ ಧ್ವನಿಗಳು ಹೊರಬಿದ್ದರೂ ಜಪ್ಪೆನ್ನದ 34ನೇ ನೆಕ್ಕಿಲಾಡಿ ಗ್ರಾ.ಪಂ. ಇದೀಗ ಗ್ರಾಮಸಭೆಯ ಎರಡು ದಿನದ ಮೊದಲು ದಾರಿ ದೀಪ ಅಳವಡಿಕೆ ಕಾಮಗಾರಿಗೆ ಮುಂದಾಗಿದೆ. 

34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ದಾರಿ ದೀಪ ವ್ಯವಸ್ಥೆ ಸಂಪೂರ್ಣ ಅವ್ಯವಸ್ಥಿತಗೊಂಡಿತ್ತು. ಹೊಸದಾಗಿ ಅಳವಡಿಸಿದ ಶೇ. 90ರಷ್ಟು ಬೀದಿ ದೀಪಗಳು ಅಳವಡಿಸಿದ ಕೆಲ ದಿನಗಳಲ್ಲೇ ಕೆಟ್ಟು ಹೋಗಿ ಉರಿಯುತ್ತಿರಲಿಲ್ಲ. ಹಲವು ಕಡೆ ಬೀದಿ ದೀಪಗಳನ್ನು ಅಳವಡಿಸಿರಲೇ ಇಲ್ಲ. ಗ್ರಾಮದ ಮುಖ್ಯ ಪೇಟೆಯಾದ ನೆಕ್ಕಿಲಾಡಿಯಲ್ಲೇ ದಾರಿದೀಪಗಳು ಉರಿಯುತ್ತಿರಲಿಲ್ಲ. ಮಳೆಗಾಲಕ್ಕೆ ಮುನ್ನ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಿಡಗಂಟಿ, ಕಸಕಡ್ಡಿಗಳಿಂದ ತುಂಬಿ ಹೋಗಿರುವ ಚರಂಡಿಗಳ ನಿರ್ವಹಣೆ ಮಾಡಬೇಕು. ಚರಂಡಿಯಿಲ್ಲದ ಕಡೆ ಚರಂಡಿಗಳನ್ನು ನಿರ್ಮಿಸಬೇಕು ಹಾಗೂ ಗ್ರಾಮದಲ್ಲಿ ದಾರಿ ದೀಪ ವ್ಯವಸ್ಥೆಯನ್ನು ಸಮರ್ಪಕವಾಗಿಸಬೇಕು ಇದೇ ಇಲ್ಲಿನ ಗ್ರಾಮಸ್ಥರಾದ ನಮ್ಮ ಪ್ರಮುಖ ಬೇಡಿಕೆಯಾಗಿತ್ತು.

ಕಳೆದ ಒಂದು ವರ್ಷದಿಂದ ದಾರಿ ದೀಪದ ಬೇಡಿಕೆ ಹಾಗೂ ಮಳೆಗಾಲ ಆರಂಭವಾಗುವ ಮೊದಲಿನಿಂದ ಚರಂಡಿ ಕಾಮಗಾರಿಯ ಬೇಡಿಕೆ ನಿರಂತರವಾಗಿ ಕೇಳಿ ಬರುತ್ತಲೇ ಇತ್ತು. ಇದಕ್ಕಾಗಿ ಮನವಿ, ಪ್ರತಿಭಟನೆ, ಹೋರಾಟಗಳು ನಡೆದವು. ಇದಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಿ, ಅದಾದ ಬಳಿಕ ಕೆಲಸ ಪ್ರಾರಂಭಿಸುತ್ತೇವೆ ಎಂಬ ಉತ್ತರ ನೀಡುವ ಮೂಲಕ ಗ್ರಾಮಸ್ಥರ ಆಕ್ರೋಶವನ್ನು ತಣಿಸುವ ಪ್ರಯತ್ನಗಳು ಇಲ್ಲಿ ನಡೆಯಿತೇ ಹೊರತು ಕಾಮಗಾರಿ ನಡೆಸಲು ಗ್ರಾ.ಪಂ. ಮುಂದಾಗಲೇ ಇಲ್ಲ. ಕೆಲವು ಸದಸ್ಯರು ಮಾತ್ರ ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ನಿರಂತರವಾಗಿ ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದರು. ಆದರೂ ಕಾಮಗಾರಿಗಳು ಮಾತ್ರ ನಡೆಯಲೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

'ಚುನಾವಣಾ ನೀತಿ ಸಂಹಿತೆಯ ನೆಪ': ಕ್ರಿಯಾ ಯೋಜನೆ ಸಿದ್ಧಪಡಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಹೇಳುತ್ತಿದ್ದ 34 ನೆಕ್ಕಿಲಾಡಿ ಗ್ರಾ.ಪಂ. ನೀತಿ ಸಂಹಿತೆ ಎಲ್ಲಾ ಮುಗಿದ ಮೇಲೆ ಜೂ.10ರಂದು ಸಾಮಾನ್ಯ ಸಭೆ ನಡೆದು, ಮುಂದಿನ ನಾಲ್ಕೈದು ದಿನಗಳೊಳಗೆ ಸಭೆ ಕರೆದು ಕ್ರಿಯಾಯೋಜನೆ ಸಿದ್ಧಪಡಿಸುವ ಬಗ್ಗೆ ಚರ್ಚೆಯಾಗಿತ್ತು. ಸಾಮಾನ್ಯ ಸಭೆ ಮುಗಿದು ಒಂದು ವಾರವಾದರೂ ಕ್ರಿಯಾಯೋಜನೆಗಾಗಿ ಸಭೆ ಕರೆಯಲೇ ಇಲ್ಲ. ಈ ಬಗ್ಗೆ ವಿಚಾರಿಸಿದಾಗ ಅಧ್ಯಕ್ಷರು ದಿನಾಂಕ ಕೊಟ್ಟಿಲ್ಲ ಎಂಬ ಮಾತುಗಳು ಅಧಿಕಾರಿಗಳಿಂದ ಕೇಳಿ ಬಂತು. ಕೊನೆಗೂ ಜುಲೈ ತಿಂಗಳ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅದು ಅನುಮೋದನೆಗೊಂಡು ಮುಂದಿನ ವಾರದೊಳಗೆ ಕಾಮಗಾರಿ ಆರಂಭವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಜುಲೈ ಬಂದು ಆಗಸ್ಟ್ ತಿಂಗಳ ಸಾಮಾನ್ಯ ಸಭೆ ಕಳೆದರೂ ಕಾಮಗಾರಿ ಮಾತ್ರ ಆಗಲೇ ಇಲ್ಲ. ಇದೀಗ ಆ.21ರಂದು ಗ್ರಾ.ಪಂ.ನ ಗ್ರಾಮ ಸಭೆ ನಡೆಯಲಿದ್ದು, ಈ ಸಂದರ್ಭ ಗ್ರಾಮಸ್ಥರ ಆಕ್ರೋಶದಿಂದ ಪಾರಾಗಲು ಆ.19ರಿಂದ ದಾರಿ ದೀಪ ನಿರ್ವಹಣೆಯ ಕೆಲಸ ಗ್ರಾ.ಪಂ. ಕೈಗೆತ್ತಿಕೊಂಡಿದೆ. ಇದು ಕೂಡಾ ತೀರಾ ಅಗತ್ಯವುಳ್ಳ ಕಡೆ ಮಾತ್ರ ಎಂದು ಹೇಳಲಾಗುತ್ತಿದೆ. 34ನೇ ನೆಕ್ಕಿಲಾಡಿಗೆ ತಾಗಿ ಕೊಂಡು ಹರಿಯುತ್ತಿರುವ ಕುಮಾರಧಾರ- ನೇತ್ರಾವತಿ ನದಿಗಳು ಉಕ್ಕೇರಿ ಹರಿದು ಪ್ರವಾಹ ಬಂದರೂ ಮಳೆಗಾಲ ಪೂರ್ವಭಾವಿಯಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಗಬೇಕಾದ ಚರಂಡಿ ನಿರ್ಮಾಣ, ನಿರ್ವಹಣೆ ಕೆಲಸ ಇನ್ನೂ ಆಗಿಲ್ಲ. ಆದ್ದರಿಂದ ಇನ್ನಾದರೂ ಗ್ರಾ.ಪಂ. ಆಡಳಿತ ಹಾಗೂ ಅಧಿಕಾರಿ ವರ್ಗದಿಂದ ಗ್ರಾಮದ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕೆಲಸವಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದಾರಿ ದೀಪ ಅಳವಡಿಕೆ ಕಾಮಗಾರಿಯನ್ನು ಆ.19ರಿಂದ ಆರಂಭಿಸಲಾಗಿದೆ. ಈಗ ತೀರಾ ಅನಿವಾರ್ಯ ಇರುವಲ್ಲಿ ಮಾತ್ರ ದಾರಿ ದೀಪಗಳನ್ನು ಅಳವಡಿಸಲಾಗುತ್ತದೆ. ಕ್ರಿಯಾಯೋಜನೆ ಪಟ್ಟಿ ಪ್ರಗತಿಯ ಹಂತದಲ್ಲಿದ್ದು, ಅದಾದ ಬಳಿಕ ಎಲ್ಲಾ ಕಡೆ ದಾರಿ ದೀಪಗಳನ್ನು ಅಳವಡಿಸಲಾಗುವುದು.
- ಜಯಪ್ರಕಾಶ್, ಅಭಿವೃದ್ಧಿ ಅಧಿಕಾರಿ, 34 ನೆಕ್ಕಿಲಾಡಿ ಗ್ರಾ.ಪಂ.

ದಾರಿ ದೀಪ ಸಮಸ್ಯೆಯ ಬಗ್ಗೆ ಹಲವು ಆಕ್ರೋಶ, ಹೋರಾಟಗಳು ನಡೆದರೂ ಕಾಮಗಾರಿ ನಡೆಸಲು ಇಚ್ಛಾಶಕ್ತಿ ತೋರದ 34 ನೆಕ್ಕಿಲಾಡಿ ಗ್ರಾ.ಪಂ. ಸಂಪೂರ್ಣ ನೆಕ್ಕಿಲಾಡಿ ಗ್ರಾಮವನ್ನು ದಾರಿ ದೀಪ ಮುಕ್ತ ಗ್ರಾ.ಪಂ. ಆಗಿ ರೂಪಿಸಿತ್ತು. ಗ್ರಾಮ ಸಭೆಗೆ ಎರಡು ದಿನದ ಮೊದಲು ದಾರಿ ದೀಪ ಅಳವಡಿಕೆ ಕಾಮಗಾರಿಯನ್ನು ನಡೆಸಲು ಮುಂದಾಗುವ ಮೂಲಕ ಸ್ವಲ್ಪವಾದರೂ ಜೀವಂತಿಕೆಯನ್ನು ತೋರಿಸಿದೆ. ಈಗಾಗಲೇ ಹಲವು ಕಡೆ ಅಳವಡಿಸಿದ ದಾರಿ ದೀಪಗಳು ಕೆಟ್ಟು ಹೋಗಿದೆ. ಇದಕ್ಕೆ ವ್ಯಾರಂಟಿ ಇದ್ದರೂ, ಗ್ರಾ.ಪಂ.ನ ಜಡತ್ವದಿಂದ ಅದರ ವ್ಯಾರಂಟಿ ಅವಧಿ ಮುಗಿದು ಹೋಗಿ ಗ್ರಾ.ಪಂ.ಗೆ ನಷ್ಟವುಂಟಾಗುವಂತಾಗಿದೆ. ಇದಕ್ಕೆಲ್ಲಾ ಯಾರು ಹೊಣೆ. ನಮ್ಮ ಬೇಡಿಕೆ ಗ್ರಾಮದ ಎಲ್ಲಾ ಕಡೆ ದಾರಿ ದೀಪ ಅಳವಡಿಸಬೇಕೆನ್ನುವುದು. 2018ರ ಕ್ರಿಯಾಯೋಜನೆಯ ಕಾಮಗಾರಿ ಪಟ್ಟಿಯಲ್ಲಿದ್ದ ಹಲವು ಕಡೆ ಇನ್ನೂ ದಾರಿ ದೀಪವನ್ನು ಅಳವಡಿಸಿಲ್ಲ.  ಆದ್ದರಿಂದ ಬೇಡಿಕೆ ಈಡೇರುವವರೆಗೆ ಈ ಬಗ್ಗೆ ಧ್ವನಿಯೆತ್ತಿಯೇ ಎತ್ತುತ್ತೇವೆ.
- ಅಬ್ದುರ್ರಹ್ಮಾನ್ ಯುನಿಕ್, ಅಧ್ಯಕ್ಷರು, 'ನಮ್ಮೂರು- ನೆಕ್ಕಿಲಾಡಿ'

ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಗ್ರಾ.ಪಂ. ಸದಸ್ಯಳಾದವಳು. ನನಗೆ ಸಿಕ್ಕಿದ ಮೂರು ಸಾಮಾನ್ಯ ಸಭೆಯಲ್ಲಿಯೂ ನಾನು ದಾರಿ ದೀಪ ಮತ್ತು ಚರಂಡಿ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿದ್ದೇನೆ. ಇನ್ನೂ ಈ ಬಗ್ಗೆ ಧ್ವನಿಯೆತ್ತುತ್ತೇನೆ. ನನ್ನ ವಾರ್ಡ್‍ನಲ್ಲಿ ದಾರಿ ದೀಪ ಮತ್ತು ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ತುರ್ತಾಗಿ ಕಾಮಗಾರಿಗಳು ಆಗಬೇಕಿದೆ. ಈ ಬಗ್ಗೆ ಪ್ರಸ್ತಾಪ ಸಲ್ಲಿಸುತ್ತಲೇ ಇದ್ದೇನೆ.

- ಅನಿ ಮಿನೇಜಸ್, ಗ್ರಾ.ಪಂ. ಸದಸ್ಯೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News