ಬೆಳ್ತಂಗಡಿ: ಅಮಾಯಕನಿಗೆ ‘ಉಗ್ರಪಟ್ಟ’ ಕಟ್ಟಿದ ರಾಜ್ಯದ ಮಾಧ್ಯಮಗಳು

Update: 2019-08-19 17:50 GMT

► ಊರಿನಲ್ಲಿ ತಲೆಯೆತ್ತಿ ನಡೆಯಲಾಗುತ್ತಿಲ್ಲ: ಅಮಾಯಕ ರವೂಫ್ ಅಳಲು

► ಕಮಿಷನರ್ ಗೆ ದೂರು, ಕ್ರಮಕ್ಕೆ ಒತ್ತಾಯ

ಮಂಗಳೂರು, ಆ.19: ‘ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಸೆಟಲೈಟ್ ಕರೆ’, ‘ಧರ್ಮಗುರುವನ್ನು ಬಂಧಿಸಿದ ಎನ್ ಐಎ’ ಹೀಗೆ ಬಗೆಬಗೆಯ ಅತಿರಂಜಿತ ಸುದ್ದಿಗಳನ್ನು ಪ್ರಸಾರ ಮಾಡಿದ ರಾಜ್ಯದ ಸುದ್ದಿ ವಾಹಿನಿಗಳು, ಪತ್ರಿಕೆಗಳು ಅಮಾಯಕ ವ್ಯಕ್ತಿಯೊಬ್ಬರ ಬದುಕಿನಲ್ಲಿ ಬಿರುಗಾಳಿಯೆಬ್ಬಿಸಿದೆ.

“ಈ ಎಲ್ಲಾ ವದಂತಿಗಳು ಸುಳ್ಳು, ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಸೆಟಲೈಟ್ ಕರೆ ಹೋದ ಬಗ್ಗೆ ಯಾವುದೇ ಮಾಹಿತಿಯಿಲ್ಲ” ಎಂದು ಸ್ವತಃ ದ.ಕ. ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದು, ಚಾನೆಲ್ ಗಳು ಈ ಬಗ್ಗೆ ಮೌನವಾಗಿವೆ. ಮಾತ್ರವಲ್ಲ, ಒಬ್ಬ ವ್ಯಕ್ತಿಯ ಬದುಕನ್ನು ಹಾಳುಗೆಡವಿದ ಬಗ್ಗೆ ಯಾವುದೇ ವಿಷಾದವಿಲ್ಲದೆ, ಕ್ಷಮೆ ಕೇಳದೆ ಎಂದಿನಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

‘ಜಾರಿಗೆಬಯಲು ಸಮೀಪದ ಗೋವಿಂದೂರು ಎಂಬಲ್ಲಿಂದ ಪಾಕಿಸ್ತಾನಕ್ಕೆ ಕರೆ ಹೋಗಿದೆ’, ‘ಕರೆ ಮಾಡಿದವರನ್ನು ಬಂಧಿಸಲಾಗಿದೆ’, ‘ಬೆಳ್ತಂಗಡಿಯ ಗೋವಿಂದೂರಿಗೆ ಎನ್ ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ’, ‘ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ’, ‘ಆತ ಕೇರಳದ ಮೌಲ್ವಿಯಾಗಿದ್ದ’, ‘ಇಲ್ಲಿ ದೊಡ್ಡ ಮನೆ ಕಟ್ಟಿದ್ದಾನೆ’, ‘ಇತ್ತೀಚಿಗೆ ಭರ್ಜರಿ ಗೃಹ ಪ್ರವೇಶ ಮಾಡಿಸಿದ್ದಾನೆ’… ಎಂದೆಲ್ಲಾ ಮಾಧ್ಯಮಗಳು ಸುದ್ದಿ ಪ್ರಕಟಿಸಿದವು.  ಅದರಲ್ಲೂ ಕೆಲವು ಚಾನೆಲ್ ಗಳು ‘ನಮ್ಮಲ್ಲೇ ಮೊದಲು’ ಎಂಬ ತಲೆಬರಹವನ್ನೂ ನೀಡಿದ್ದವು.

ಮಂಗಳೂರು ಸಮೀಪ ಮಂಜನಾಡಿಯ ಸಂಸ್ಥೆಯೊಂದರ ಮುಖ್ಯಸ್ಥರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ರವೂಫ್ ಅವರಿಗೆ ಮಾಧ್ಯಮಗಳು ತನಗೆ ‘ಉಗ್ರ ಪಟ್ಟ ಕಟ್ಟಿ, ಬಂಧಿಸಿ ಬಿಟ್ಟಿರುವ’ ವಿಷಯವೇ ಗೊತ್ತಿರಲಿಲ್ಲ. ಮನೆಯಿಂದ, ಊರವರಿಂದ ಫೋನ್ ಕರೆಗಳ ಸುರಿಮಳೆ ಬಂದ ಮೇಲೆಯೇ ರವೂಫ್ ಗೆ ಆಗಿರುವ ಅನಾಹುತದ ಅರಿವಾಗಿದೆ. ತಕ್ಷಣ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಅವರನ್ನು ಸಂಪರ್ಕಿಸಿ ರವೂಫ್ ವಿಷಯ ತಿಳಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅವರನ್ನು ಸಂಪರ್ಕಿಸಿದ ಖಾದರ್ ಅವರು ಈ ವಿಷಯ ಏನೆಂದು ಆದಷ್ಟು ಬೇಗ ಸ್ಪಷ್ಟಪಡಿಸಿ ಎಂದು ರವೂಫ್ ಅವರನ್ನು ಎಸ್ಪಿ ಬಳಿ ಕಳುಹಿಸಿದ್ದಾರೆ. ಎಸ್ಪಿ ಅವರನ್ನು ಭೇಟಿಯಾದ ರವೂಫ್ ತನ್ನ ಹಿನ್ನೆಲೆ, ಮನೆ, ಉದ್ಯೋಗದ ವಿವರ ನೀಡಿ ತನ್ನ ವಿರುದ್ಧ ಹೀಗೆ ಘೋರ ಅಪಪ್ರಚಾರ ಮಾಡಿರುವ ವ್ಯಕ್ತಿಗಳು ಹಾಗು ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.  ಪೊಲೀಸ್ ವರಿಷ್ಠಾಧಿಕಾರಿ ಮಾತ್ರವಲ್ಲದೆ, ಕಮಿಷನರ್ ಅವರ ಬಳಿ ತೆರಳಿ ಈ ಘಟನೆಗಳಿಗೂ, ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

 “ವಿದೇಶದಿಂದ ಸೆಟಲೈಟ್ ಕರೆ ಬಂದಿದೆ ಎಂದು ಕೆಲ ದಿನಪತ್ರಿಕೆಗಳು ನನ್ನ ಮಾನ ಹರಾಜು ಹಾಕಿವೆ. ಗ್ರಾಮದಲ್ಲಿ ತಲೆಯೆತ್ತಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಅಮಾಯಕನಿಗೆ ಉಗ್ರಪಟ್ಟ ಕಟ್ಟಲಾಗಿದೆ. ಇದರಿಂದ ಮಾನಸಿಕ ಕಿರುಕುಳ ಹೆಚ್ಚುತ್ತಿದೆ” ಎಂದು ರವೂಫ್ ಅಳಲು ತೋಡಿಕೊಂಡಿದ್ದಾರೆ.

 “ಘಟನೆಯಿಂದ ಗ್ರಾಮದಲ್ಲಿ ನಮ್ಮ ಕುಟುಂಬವನ್ನು ನೋಡುವ ರೀತಿಯೇ ಬದಲಾಗಿದೆ. ಸ್ಥಳೀಯರು ವಿನಾಕಾರಣ ಅನುಮಾನ ಪಡುತ್ತಿದ್ದಾರೆ. ನನಗೆ ಪಾಕಿಸ್ತಾನದ ಸಂಬಂಧವಿದೆ ಎನ್ನುವ ಮಾಧ್ಯಮಗಳ ಸುದ್ದಿ ನೋಡಿ ನನ್ನ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದರು" ಎಂದು ಅವರು ‘ವಾರ್ತಾ ಭಾರತಿ’ಗೆ ತಿಳಿಸಿದ್ದಾರೆ.

“ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ರನ್ನು ಸೋಮವಾರ ಸಂಜೆ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುದ್ದಿವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಲೂ ಒತ್ತಾಯ ಮಾಡಿದ್ದೇವೆ. ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ನ್ಯಾಯ ಸಿಗುವುದು ಖಚಿತ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

“ನಾನು ವಿದೇಶಕ್ಕೂ ಕರೆ ಮಾಡಿಯೂ ಇಲ್ಲ. ಕರೆ ಬಂದೂ ಇಲ್ಲ. ಸಂಪೂರ್ಣ ಸುಳ್ಳು ಸುದ್ದಿ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಒತ್ತಾಯಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು: ಯು.ಟಿ. ಖಾದರ್

ರವೂಫ್ ಅವರ ಬಗ್ಗೆ ಹರಡಿರುವ ವದಂತಿ ಬಗ್ಗೆ ಸಮಗ್ರ ತನಿಖೆ ನಡೆಸಿ ವಿಷಯ ಸ್ಪಷ್ಟಪಡಿಸಬೇಕು. ಅವರ ವಿರುದ್ಧ ಅಂತಹ ಯಾವುದೇ ಅರೋಪ ಇಲ್ಲ ಎಂದು ಎಸ್ಪಿ ಹೇಳಿದ್ದಾರೆ. ಹಾಗಾದರೆ ಅವರ ವಿರುದ್ಧ ಈ ರೀತಿ ಸುಳ್ಳು ಸುದ್ದಿ ಹರಡಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಎನ್‌ಐಎ ಯಾರನ್ನೂ ಬಂಧಿಸಿರುವುದು ವರದಿಯಾಗಿಲ್ಲ: ದ.ಕ. ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್

ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವು ಬೆಳ್ತಂಗಡಿಯಿಂದ ಓರ್ವನನ್ನು ಬಂಧಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಇಂತಹ ಯಾವುದೇ ಘಟನೆ ವರದಿಯಾಗಿಲ್ಲ ಹಾಗೂ ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಕರೆ ಹೋಗಿರುವ ಅಥವಾ ಇಲ್ಲಿಂದ ಕರೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News