ವಾರದೊಳಗೆ ಸರಕಾರಿ ನಿವಾಸ ತೆರವುಗೊಳಿಸಿ: ಮಾಜಿ ಎಂಪಿಗಳಿಗೆ ಸೂಚನೆ

Update: 2019-08-19 18:25 GMT

ಹೊಸದಿಲ್ಲಿ, ಆ.19: ಸರಕಾರಿ ನಿವಾಸದಲ್ಲಿ ಕಾಲಾವಧಿ ಮೀರಿ ನೆಲೆಸಿರುವ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ 7 ದಿನದೊಳಗೆ ನಿವಾಸ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಂಸತ್ತಿನ ವಸತಿ ಸಮಿತಿಯ ಅಧ್ಯಕ್ಷ ಸಿಆರ್ ಪಾಟೀಲ್ ಹೇಳಿದ್ದಾರೆ.

ಲುಟಿಯಾನ್ ದಿಲ್ಲಿ ಪ್ರದೇಶದಲ್ಲಿರುವ ಸರಕಾರಿ ಬಂಗಲೆಗಳನ್ನು ಸಂಸದರ ವಾಸಕ್ಕೆ ನೀಡಲಾಗುತ್ತದೆ. ಆದರೆ ಮೇ 25ರಂದು 16ನೇ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದರೂ 200ಕ್ಕೂ ಹೆಚ್ಚಿನ ಸಂಸದರು ತಮ್ಮ ನಿವಾಸವನ್ನು ತೆರವುಗೊಳಿಸಿರಲಿಲ್ಲ. ಆದ್ದರಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದರು ತಾತ್ಕಾಲಿಕ ನಿವಾಸದ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತು ಚರ್ಚಿಸಲು ಸೋಮವಾರ ಸಂಸತ್ತಿನ ವಸತಿ ಸಮಿತಿಯ ಸಭೆ ನಡೆದಿದ್ದು ಸಭೆಯಲ್ಲಿ ಮೂರು ದಿನದ ಬಳಿಕ ಈ ನಿವಾಸಗಳ ವಿದ್ಯುತ್, ನೀರು ಪೂರೈಕೆ ಹಾಗೂ ಗ್ಯಾಸ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಮಾಜಿ ಸಂಸದರಿಗೆ ವಾರದೊಳಗೆ ನಿವಾಸ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ನಿಯಮದ ಪ್ರಕಾರ, ಲೋಕಸಭೆ ವಿಸರ್ಜನೆಯಾದ ಒಂದು ತಿಂಗಳೊಳಗೆ ಮಾಜಿ ಸಂಸದರು ಸರಕಾರಿ ನಿವಾಸವನ್ನು ತೆರವುಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News