ಹಿಂದಿ ಭಾಷಿಕ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ನೆರವಾಗಲು ಯೋಗ್ಯತಾ ಪರೀಕ್ಷೆ ರದ್ದುಗೊಳಿಸಿ: ಆರೆಸ್ಸೆಸ್ ಆಗ್ರಹ

Update: 2019-08-20 17:56 GMT

ಹೊಸದಿಲ್ಲಿ,ಆ.20: ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಗಳಿಗಾಗಿ ಸೇನಾ ಪರೀಕ್ಷೆಗಳ ಮಾದರಿಯಲ್ಲಿ ಆ್ಯಪ್ಟಿಟ್ಯೂಡ್ ಟೆಸ್ಟ್ ಅಥವಾ ಯೋಗ್ಯತಾ ಪರೀಕ್ಷೆ (ಸಿಎಸ್‌ಎಟಿ)ಯನ್ನು ಕೈಬಿಡುವಂತೆ ಮತ್ತು ಸಂದರ್ಶನದ ಬದಲು ಮಾನಸಿಕ ಕ್ಷಮತೆ ಪರೀಕ್ಷೆಯನ್ನು ನಡೆಸುವಂತೆ ಆರೆಸ್ಸೆಸ್ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಹಿಂದಿಯಲ್ಲಿ ಪರೀಕ್ಷೆಗಳನ್ನು ಬರೆಯುವವರಿಗೆ ಸಿಎಸ್‌ಎಟಿ ಅನುಕೂಲಕರವಾಗಿಲ್ಲ ಎಂದು ಪ್ರತಿಪಾದಿಸಿರುವ ಅದು,ಸಂದರ್ಶನಗಳು ಏಕರೂಪವಾಗಿಲ್ಲ ಎಂದು ಆರೋಪಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಆರೆಸ್ಸೆಸ್ ರಚಿಸಿದ್ದ ಸಮಿತಿಯು ವಾರಾಂತ್ಯದಲ್ಲಿ ಇಲ್ಲಿ ನಡೆದ ಚರ್ಚೆಗಳ ಸಂದರ್ಭ ಈ ಎರಡು ಸಲಹೆಗಳನ್ನು ನೀಡಿದೆ.

ಸೇವಾ ಆಯೋಗಗಳು,ಲೋಕಸೇವಾ ಆಯೋಗದ ಸದಸ್ಯರು ಮತ್ತು ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದ ಚರ್ಚೆಗಳಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಭ್ಯರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಯಾವುದೇ ತಾರತಮ್ಯವಿರದ ರೀತಿಯಲ್ಲಿ ಪರೀಕ್ಷಾ ಸ್ವರೂಪದಲ್ಲಿ ಸುಧಾರಣೆಗಳನ್ನು ತರಬೇಕಾಗಿದೆ. ಇದಕ್ಕಾಗಿ ನಾವು ಕಳೆದ ಐದು ವರ್ಷಗಳಿಂದ ಶ್ರಮಿಸುತ್ತಿದ್ದೇವೆ. ಹಾಲಿ ಪರೀಕ್ಷೆಗಳನ್ನು ನಡೆಸುತ್ತಿರುವ ರೀತಿಯು ಉದ್ಯೋಗದ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುತ್ತಿಲ್ಲ ಎಂದು ಸಂಘ ಪರಿವಾರದ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ್‌ನ ರಾಷ್ಟ್ರೀಯ ಸಂಚಾಲಕ(ಸ್ಪರ್ಧಾತ್ಮಕ ಪರೀಕ್ಷೆಗಳು) ದೇವೇಂದ್ರ ಸಿಂಗ್ ಅವರು ತಿಳಿಸಿದರು.

ಸಿಎಸ್‌ಎಟಿ ಕುರಿತು ಆರೆಸ್ಸೆಸ್ ನಿಲುವು ಯುಪಿಎಸ್‌ಸಿಯ ಪ್ರಸ್ತಾವಕ್ಕೆ ಅನುಗುಣವಾಗಿದೆ. ಈ ವರ್ಷದ ಪೂರ್ವಾರ್ಧದಲ್ಲಿ ಸರಕಾರಕ್ಕೆ ಬರೆದ ಪತ್ರದಲ್ಲಿ ಯುಪಿಎಸ್‌ಸಿಯು ವಿವಾದಾತ್ಮಕ ಸಿಎಸ್‌ಎಟಿಯನ್ನು ಕೈಬಿಡಲು ಶಿಫಾರಸು ಮಾಡಿತ್ತು.

ಸಿಎಸ್‌ಎಟಿಯಲ್ಲಿ ತೇರ್ಗಡೆಗೊಳ್ಳುವ ಶೇ.90ರಷ್ಟು ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ,ಹೀಗಾಗಿ ಅದನ್ನು ಅರ್ಹತಾ ಪರೀಕ್ಷೆಯಾಗಿಸಿದ್ದು ನ್ಯಾಯವಲ್ಲ ಎಂದು ಸಿಂಗ್ ಹೇಳಿದರು.

ಯುಪಿಎಸ್‌ಸಿ ಸಂದರ್ಶನಗಳು ಏಕರೂಪವಾಗಿಲ್ಲ ಎಂದು ಆರೋಪಿಸಿದ ಅವರು,ಕೆಲವು ಸಂದರ್ಶನ ಸಮಿತಿಗಳು ಉದಾರವಾಗಿ ಅಂಕಗಳನ್ನು ನೀಡಿದರೆ ಇತರ ಕೆಲವು ಸಮಿತಿಗಳು ಕಟ್ಟುನಿಟ್ಟಾಗಿರುತ್ತವೆ ಮತ್ತು ಅಭ್ಯರ್ಥಿಗಳಿಗೆ ನಿರಾಶಾದಾಯಕ ಅಂಕಗಳನ್ನು ನೀಡುತ್ತವೆ. ಅಂತಿಮವಾಗಿ ಅಭ್ಯರ್ಥಿಯ ಭವಿಷ್ಯವು ಆತ/ಆಕೆ ಯಾವ ಸಮಿತಿಯ ಸಂದರ್ಶನವನ್ನು ಎದುರಿಸಿದ್ದರು ಎನ್ನುವುದನ್ನು ಅವಲಂಬಿಸಿರುತ್ತದೆ. ಸಂದರ್ಶನಕ್ಕೆ ಏಕರೂಪ ಮಾನದಂಡವಿರಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News