ರವಿದಾಸ ಮಂದಿರ ಧ್ವಂಸ ವಿರೋಧಿಸಿ ಬೀದಿಗಿಳಿದ ಸಾವಿರಾರು ದಲಿತರು

Update: 2019-08-21 14:40 GMT

ಹೊಸದಿಲ್ಲಿ, ಆ.21: ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ರವಿದಾಸ ಮಂದಿರ ಧ್ವಂಸ ಘಟನೆಯನ್ನು ಪ್ರತಿಭಟಿಸಿ ದೇಶಾದ್ಯಂತ ಸಾವಿರಾರು ದಲಿತರು ಕೇಂದ್ರ ದಿಲ್ಲಿಯ ಜಂದೆವಾಲನ್ ಮತ್ತು ರಾಮಲೀಲ ಮೈದಾನದುದ್ದಕ್ಕೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಗಸ್ಟ್ 10ರಂದು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಈ ಮಂದಿರವನ್ನು ಕೆಡವಿತ್ತು. ಬುಧವಾರ ನೀಲಿ ಟೋಪಿ ಧರಿಸಿ, ನೀಲಿ ಧ್ವಜಗಳನ್ನು ಹಿಡಿದ ಪ್ರತಿಭಟನಾಕಾರರು ಜಂದೆವಾಲನ್‌ನ ಅಂಬೇಡ್ಕರ್ ಭವನದಿಂದ ರಾಮಲೀಲ ಮೈದಾನದವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯ ಪರಿಣಾಮವಾಗಿ ಅಲ್ಲಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಪ್ರತಿಭಟನಾಕಾರರು ಜೈಭೀಮ್ ಘೋಷಣೆಯನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು ಹಾಗೂ ವಿವಾದಿತ ಜಮೀನನ್ನು ದಲಿತರಿಗೆ ಬಿಟ್ಟುಕೊಡುವಂತೆ ಹಾಗೂ ಅದೇ ಸ್ಥಳದಲ್ಲಿ ಮಂದಿರ ನಿರ್ಮಿಸಿಕೊಡುವಂತೆ ಸರಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿವಿಧ ರಾಜಕೀಯ ಪಕ್ಷಗಳು ಧ್ವಂಸಗೈದ ಮಂದಿರವನ್ನು ತುಘಲಕಾಬಾದ್ ಅರಣ್ಯ ಪ್ರದೇಶದ ಅದೇ ಜಾಗದಲ್ಲಿ ಅಥವಾ ಪರ್ಯಾಯ ಸ್ಥಳದಲ್ಲಿ ನಿರ್ಮಿಸಿಕೊಡುವಂತೆ ಸರಕಾರವನ್ನು ಆಗ್ರಹಿಸಿವೆ. ಪ್ರತಿಭಟನೆಯಲ್ಲಿ ದಿಲ್ಲಿಯ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಗೌತಮ್, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮತ್ತು ಸಮುದಾಯದ ಆಧ್ಯಾತ್ಮ ಗುರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಮ್ಮ ಹೋರಾಟ ಸಮುದಾಯಕ್ಕೆ ಎಸಗುತ್ತಿರುವ ಅನ್ಯಾಯದ ವಿರುದ್ಧವೇ ಹೊರತು ಸರ್ವೋಚ್ಚ ನ್ಯಾಯಾಲಯದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಇಲ್ಲಿ ಸಮುದಾಯದ ಪ್ರತಿನಿಧಿಯಾಗಿ ಆಗಮಿಸಿದ್ದೇನೆಯೇ ಹೊರತು ದಿಲ್ಲಿ ಸಚಿವ ಅಥವಾ ರಾಜಕಾರಣಿಯಾಗಿ ಅಲ್ಲ. ನಾವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ, ಆದರೆ ಕೇವಲ ದಲಿತ ಸಮುದಾಯದ ಮಂದಿರಗಳು ಮತ್ತು ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಮಾತ್ರ ಯಾಕೆ ಧ್ವಂಸಗೈಯ್ಯಲಾಗುತ್ತಿದೆ ಎನ್ನುವುದಕ್ಕೆ ಸರಕಾರ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆಮ್ ಆದ್ಮಿ ಸಂಚು ಬಿಜೆಪಿ ನಾಯಕ

ದಿಲ್ಲಿಯಲ್ಲಿ ದಲಿತರು ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯದ ಆಮ್ ಆದ್ಮಿ ಪಕ್ಷವೇ ಹೊಣೆ. ಆಪ್ ಈ ವಿವಾದವನ್ನು ರಾಜಕೀಯಗೊಳಿಸುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ವಿಜಯ್ ಗೋಯಲ್ ಆರೋಪಿಸಿದ್ದಾರೆ. ಇತ್ತೀಚೆಗೆ ತಾನು ದಲಿತ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದೆ ಮತ್ತು ಪರಿಹಾರವನ್ನು ಸೂಚಿಸಿದ್ದೆ. ಆದರೆ ಆಪ್ ಈ ವಿಷಯದಲ್ಲಿ ಲಾಭಗಳಿಸಲು ಬಯಸಿದೆ ಎಂದು ಗೋಯಲ್ ದೂರಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಅನುಮತಿ ಪಡೆದು ಮಂದಿರವನ್ನು ಪರ್ಯಾಯ ಸ್ಥಳದಲ್ಲಿ ನಿರ್ಮಿಸುವ ಪ್ರಸ್ತಾವವನ್ನು ನಾನು ಮುಖಂಡರ ಮುಂದೆ ಇಟ್ಟಿದ್ದೇನೆ. ಅವರು ಅದಕ್ಕೆ ಒಪ್ಪಿದರೆ ಡಿಡಿಎ ಜೊತೆ ಮಾತುಕತೆ ನಡೆಸಲಾಗುವುದು ಎಂದು ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News