ಲೋಕ ಅದಾಲತ್ ಮೂಲಕ ಬಡವರಿಗೆ ಉಚಿತ ನ್ಯಾಯ: ಕಾವೇರಿ

Update: 2019-08-21 14:55 GMT

ಉಡುಪಿ, ಆ.21: ನ್ಯಾಯದಿಂದ ವಂಚಿತರಾದ, ಆರ್ಥಿಕವಾಗಿ ಹಿಂದುಳಿ ದವರಿಗೆ ಲೋಕ ಅದಾಲತ್ ಮೂಲಕ ಉಚಿತವಾಗಿ ನ್ಯಾಯ ಒದಗಿಸಿ ಕೊಡುವ ವ್ಯವಸ್ಥೆ ಇದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಸ್ಯ ಕಾರ್ಯದರ್ಶಿ ಕಾವೇರಿ ತಿಳಿಸಿದ್ದಾರೆ.

ಬುಧವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ವಕೀಲರ ಸಂಘ ಉಡುಪಿ ಮತ್ತು ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಶ್ಯಾಮಿಲಿ ಇನ್‌ನ ಬ್ಯಾಂಕ್ ಆಪ್ ಬರೋಡಾ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ನಡೆದ ಜನತಾ ಅದಾಲತ್, ಮಧ್ಯಸ್ಥಿಕೆ ಮತ್ತು ಸಮಾಲೋಚನಾ ವಿಷಯದ ಮಾಹಿತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಲೋಕ ಅದಾಲತ್‌ನಲ್ಲಿ ಯಾವುದೇ ಶುಲ್ಕ ಪಾವತಿಸದೆ ಸಾರ್ವಜನಿಕರು ಮುಕ್ತವಾಗಿ ನ್ಯಾಯ ಪಡೆಯಬಹುದು. ಆರ್ಥಿಕವಾಗಿ ಬಲಿಷ್ಠರಾಗಿರುವವರು ದುರ್ಬಲರನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಕಾನೂನಿನಅರಿವು ಇಲ್ಲದೇ ಸಾರ್ವಜನಿಕರು ಅನೇಕ ಬಾರಿ ಸುಲಭವಾಗಿ ಮೋಸ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯ ಒದಗಿಸಿ ಕೊಡುವಲ್ಲಿ ನೆರವಾಗುತ್ತದೆ ಎಂದು ಕಾವೇರಿ ವಿವರಿಸಿದರು.

ಲೋಕ ಅದಾಲತ್‌ನಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಪ್ಯಾನಲ್ ಅಡ್ವೊಕೇಟ್ ಮೂಲಕ ಪ್ರಕರಣ ದಾಖಲಿಸಿ, ನ್ಯಾಯ ಒದಗಿಸಿಕೊಡಲಾಗುತ್ತದೆ. ಸರಕಾರ ಘೋಷಿಸುವ ಸಾಲಮನ್ನಾ ಕೆಲವೊಂದು ಇತಿಮಿತಿಗಳನ್ನು ಒಳಗೊಂಡಿದ್ದು, ಎಲ್ಲರಿಗೂ ಅನ್ವಯಿಸುವುದಿಲ್ಲ. ಕಷ್ಟ ಕಾಲದಲ್ಲಿ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದ ಸಂದರ್ಭದಲ್ಲಿ ಲೋಕ ಅದಾಲತ್ ಮತ್ತು ಬ್ಯಾಂಕ್ ಅದಾಲತ್ ಮೂಲಕ ರಿಯಾಯಿತಿ ದರದಲ್ಲಿ ಸಾಲ ಮರು ಪಾವತಿ ಮಾಡುವ ವ್ಯವಸ್ಥೆ ಇದೆ ಎಂದರು.

ಜನತಾ ಅದಾಲತ್‌ನಲ್ಲಿ ಒಂದೇಸೆಟಲ್‌ಮೆಂಟ್‌ನಲ್ಲಿ ವ್ಯಾಜ್ಯಗಳ ವಿಚಾರಣೆ ನಡೆಯುವುದರಿಂದ ನ್ಯಾಯಕ್ಕಾಗಿ ಕೋರ್ಟಿಗೆ ಅಲೆದಾಡುವ ಸಮಸ್ಯೆ ತಪ್ಪುತ್ತದೆ. ಅಲ್ಲದೇ ಸಾಲ ಮರು ಪಾವತಿಗೆ ಸಹಕಾರಿಯಾಗುತ್ತದೆ ಎಂದ ಅವರು, ಲೋಕ ಅದಾಲತ್ ಸೇವೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ವಕೀಲ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯಸ್ಥಿಕೆದಾರ ಬಿ.ಮುರಳೀಧರ ವಾರಂಬಳ್ಳಿ ಮಾತನಾಡಿ, ಕೌಟುಂಬಿಕ ಕಲಹ ಹಾಗೂ ಇತರ ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವರ್ಷಗಟ್ಟಲೆ ಅಲೆದಾಡಿದ ನಂತರವೂ ನ್ಯಾಯಸಿಗದೆ ಸಾರ್ವಜನಿಕರು ಪರದಾಡುತ್ತಿರುವ ಕಾರಣ ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಎನ್ನುವ ದೃಷ್ಟಿಯಿಂದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಆರಂಭಿಸಲಾಯಿತು. ಕಾನೂನಿನ ಅರಿವಿಲ್ಲದಿದ್ದಾಗ ದುರ್ಬಲರು ಸುಲಭವಾಗಿ ಅನ್ಯಾಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ನ್ಯಾಯ ಪಡೆದುಕೊಳ್ಳಬೇಕಾದರೆ ಸಾರ್ವಜನಿಕರಲ್ಲಿ ಕಾನೂನಿನ ಅರಿವು ಅಗತ್ಯವಾಗಿದೆ. ಅರಿವು ಇದ್ದಲ್ಲಿ ಕಾನೂನು ರಕ್ಷಣೆ ನೀಡುತ್ತದೆ. ಇದಕ್ಕಾಗಿ ಮಾಹಿತಿ ಕೊರತೆ ಇರುವ ಕಡೆಗಳಲ್ಲಿ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದರು.

ಜನತಾ ಅದಾಲತ್‌ನಲ್ಲಿ ನ್ಯಾಯಾಧೀಶರುಮತ್ತು ಸಂದಾನಕಾರರು ಎರಡೂ ಕಡೆಯ ಪ್ರತಿವಾದಿಗಳನ್ನು ಕರೆಸಿ ವ್ಯಾಜ್ಯದ ಕುರಿತು ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನ ಪಡುತ್ತಾರೆ. ಜನತಾ ಅದಾಲತ್‌ನಲ್ಲಿ ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣ ಹಾಗೂ ನ್ಯಾಯಾಲಯದಲ್ಲಿ ಅರ್ಜಿ ಹಾಕದೇ ಇರುವ ಪ್ರಕರಣಗಳ ಇತ್ಯರ್ಥ ನಡೆಸಲಾಗುತ್ತದೆ.

ಸಹಾಯಕ ವ್ಯವಸ್ಥಾಪಕ ರವಿಕುಮಾರ್ ನಿರೂಪಿಸಿ ಸ್ವಾಗತಿಸಿದರು. ಉಡುಪಿ ಬ್ಯಾಂಕ್ ಆಪ್ ಬರೋಡಾದ ಪ್ರಾದೇಶಿಕ ಕಚೇರಿಯ ಉಪ ಪ್ರಾದೇಶಿಕ ವ್ಯವಸ್ಥಾಪಕ ಜಿ. ಗೋಪಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News