ಸಂವಿಧಾನದ 370ನೇ ವಿಧಿ ರದ್ಧತಿ ಸಾಧ್ಯವಿಲ್ಲ : ಪ್ರೊ.ಪಟ್ಟಾಭಿರಾಮ ಸೋಮಯಾಜಿ

Update: 2019-08-21 15:18 GMT

ಮಂಗಳೂರು, ಆ.21: ಸಂವಿಧಾನದ 370ನೇ ವಿಧಿಯಲ್ಲಿ ಯಾವುದೇ ತಿದ್ದುಪಡಿ ಮಾಡಬೇಕಾದರೂ ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಮಿತಿಯ ಅನುಮೋದನೆಯೊಂದಿಗೆ ಮಾತ್ರ ಮಾಡಬೇಕೆಂಬ ನಿರ್ಬಂಧಗಳಿದ್ದುವು. ಈಗ ಭಾರತ ಸರಕಾರವು ಕಾಶ್ಮೀರದ ಸಂವಿಧಾನ ರಚನಾ ಸಮಿತಿ ಇಲ್ಲ, ರಚನಾ ಸಮಿತಿಯ ಬದಲು ಇರಬೇಕಾದ ಚುನಾಯಿತ ಅಸೆಂಬ್ಲಿಯೂ, ಮಂತ್ರಿಮಂಡಲವೂ ಇಲ್ಲ, ರಾಷ್ಟ್ರಪತಿ ಆಳ್ವಿಕೆಯಿಂದ ರಾಜ್ಯಪಾಲರೇ ಮಂತ್ರಿಮಂಡಲ ಮತ್ತು ಅಸೆಂಬ್ಲಿ ಹಾಗೂ ಜನಸಮುದಾಯವನ್ನು ಪ್ರತಿನಿಧಿಸುತ್ತಾರೆಂಬ ಕಾಲ್ಪನಿಕ ನಿರೂಪಣೆ ನೀಡಿ ರಾಷ್ಟ್ರಪತಿ ಆದೇಶದ ಮೂಲಕ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿಯನ್ನು ಕಿತ್ತುಹಾಕುವ ಕ್ರಮಕೈಗೊಂಡಿರುವುದು ಅಸಂವಿಧಾನಿಕವಾಗಿದೆ ಎಂದು ಚಿಂತಕ ಹಾಗೂ ಲೇಖಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ಹೇಳಿದರು.

ಪ್ರಗತಿಪರ ಚಿಂತಕರ ವೇದಿಕೆ ನಗರದ ಎನ್‌ಜಿಒ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಶ್ಮೀರದ ಜನತೆಗೆ ಭಾರತ ಒಕ್ಕೂಟಕ್ಕೆ ಸೇರುವಾಗ ನೀಡಲಾದ ಸ್ವಾಯತ್ತೆಯ ಭರವಸೆಗಳನ್ನು ಮೊದಲಿನಿಂದಲೂ ಕಡೆಗಣಿಸಲಾಗಿದೆ. ಕಾಂಗ್ರೆಸ್ ಕೇಂದ್ರ ಸರಕಾರದಲ್ಲಿ ಆಡಳಿತ ನಡೆಸುತ್ತಿದ್ದಾಗಲೇ ಈ ಪ್ರಕ್ರಿಯೆಗಳು ಆರಂಭವಾಗಿದ್ದವು. ಆಂತರಿಕವಾದ ಕಾಶ್ಮೀರ ಸಂವಿಧಾನದನ್ವಯ ಕಾಶ್ಮೀರ ರಾಜ್ಯದ ಪ್ರಧಾನಿಯಾಗಿ ಚುನಾಯಿತರಾಗಿದ್ದ ಶೇಖ್ ಅಬ್ದುಲ್ಲಾರನ್ನು ಭಾರತ ಸರಕಾರವು 15 ವರ್ಷಗಳ ಕಾಲ ಸೆರೆಯಲ್ಲಿಟ್ಟಿತ್ತು. ಮೊದಲಿನ ಕಾಶ್ಮೀರ ರಾಜ್ಯ ಸರಕಾರವು ಬೇರೆ ರಾಜ್ಯಗಳಲ್ಲಿ ಇನ್ನೂ ಆರಂಭವಾಗಿರದಿದ್ದ ಭೂಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಹೊರರಾಜ್ಯದವರು ಆ ರಾಜ್ಯದಲ್ಲಿ ಭೂಮಿ ಕೊಳ್ಳುವಂತಿರಲಿಲ್ಲ ಅಷ್ಟೆ. ಕಾಶ್ಮೀರದಲ್ಲಿ ಕೇಂದ್ರ ಸರಕಾರದ ನಿರ್ದೇಶನದಲ್ಲಿರುವ ಕೈಗೊಂಬೆ ಸರಕಾರಗಳಿದ್ದರೂ ಅಲ್ಲಿನ ಜನ ಪರಿಶ್ರಮದಿಂದ ರಾಜ್ಯವನ್ನು ಅಭಿವೃದ್ಧಿಗೊಳಿಸಿದ್ದಾರೆ ಎಂದು ಪ್ರೊ.ಪಟ್ಟಾಭಿರಾಮ ಸೋಮಯಾಜಿ ತಿಳಿಸಿದರು.

ಕೇರಳ, ತಮಿಳುನಾಡು, ಕರ್ನಾಟಕಗಳ ಬಳಿಕ ನಾಲ್ಕನೇ ಅಭಿವೃದ್ಧಿ ಹೊಂದಿದ ರಾಜ್ಯ ಜಮ್ಮು-ಕಾಶ್ಮೀರವಾಗಿದೆ. ಅಭಿವೃದ್ಧಿಯ ಸುಳ್ಳು ನಗಾರಿ ಬಾರಿಸುತ್ತಿರುವ ಗುಜರಾತಿಗಿಂತಲೂ ಮುಂದಿದೆ. ಕೇಂದ್ರದಲ್ಲಿ ಇಂದು ಆಡಳಿತವನ್ನು ನಿಯಂತ್ರಿಸುವ ದೊಡ್ಡ ಉದ್ಯಮಿಗಳಿಗೆ ಕಾಶ್ಮೀರದ ಭೂಮಿ ಯನ್ನು ಕಬಳಿಸಬೇಕಾಗಿದೆ. ಈ ನಿರ್ದೆಶನಕ್ಕೊಳಪಟ್ಟು ಹಾಗೂ ಮುಸ್ಲಿಂ ಬಹುತ್ವದ ಆಡಳಿತವನ್ನು ಬಗ್ಗುಬಡಿಯಬೇಕೆಂಬ ಏಕೈಕ ಉದ್ದೇಶದಿಂದ ಕೋಮುವಾದಿ ಕೇಂದ್ರ ಸರಕಾರ, ಕಾಶ್ಮೀರದ ಸ್ಥಾನವನ್ನು ಬಲಹೀನಗೊಳಿಸಲು 370ನೇ ವಿಧಿ ರದ್ದು ಪ್ರಕ್ರಿಯೆಯನ್ನು ರಾಷ್ಟ್ರಪತಿ ಮೂಲಕ ಮಾಡಿಸಿದೆ ಎಂದು ಪ್ರೊ.ಪಟ್ಟಾಭಿರಾಮ ಸೋಮಯಾಜಿ ಆರೋಪಿಸಿದರು.

ಪ್ಯಾಲೇಸ್ತೀನ್‌ನಲ್ಲಿ ಅಲ್ಲಿನ ಮೂಲನಿವಾಸಿಗಳನ್ನು ಇಸ್ರೇಲ್ ಆಡಳಿತವು ಅಮೆರಿಕಾ ಬೆಂಬಲದಲ್ಲಿ ಹಂತ ಹಂತವಾಗಿ ನಿರ್ಗತಿಕರನ್ನಾಗಿ ಮಾಡುತ್ತಿದೆ. ಅದೇ ರೀತಿ ಕಾಶ್ಮೀರಿ ಮುಸ್ಲಿಮರನ್ನು ನಿರ್ಗತಿಕರನ್ನಾಗಿ ಮಾಡಲು ಕೇಂದ್ರ ಸರಕಾರ ಪಿತೂರು ಮಾಡಿದೆ ಎಂದು ಟೀಕಿಸಿದರು.

ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷ ಐ.ಎ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಕೃಷ್ಣಪ್ಪಕೊಂಚಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನೋಜ್ ವಾಮಂಜೂರು ಸ್ವಾಗತಿಸಿದರು. ಯೋಗೀಶ್ ಜಪ್ಪಿನಮೊಗರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News