ದ.ಕ.ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಹರೀಶ್ ಕುಮಾರ್ ಆಗ್ರಹ

Update: 2019-08-21 15:21 GMT

 ಮಂಗಳೂರು, ಆ.21: ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ನೆರೆ ಹಾವಳಿಯಿಂದ ಪ್ರಕೃತಿ ವಿಕೋಪ ಸಂಭವಿಸಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅಲ್ಲದೆ ಹಲವು ಮಂದಿ ಮನೆಗಳನ್ನು ಕಳೆದುಕೊಂಡು ಗಂಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ. ನದಿಗಳಿಂದ ಉಕ್ಕಿ ಬಂದ ನೀರು ಅಲ್ಪಸ್ವಲ್ಪ ಬೆಳೆಗಳನ್ನು ಕೊಚ್ಚಿ ಹೋದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಹಲವು ಗ್ರಾಮಗಳ ಸೇತುವೆಗಳು, ಕಾಲುಸಂಕಗಳು, ವಿದ್ಯುತ್ ಕಂಬಗಳು ನೀರಿನ ರಭಸಕ್ಕೆ ಉರುಳಿದ್ದು ಗ್ರಾಮಗಳ ನಡುವೆ ಸಂಪರ್ಕ ಕಳೆದುಕೊಂಡು ಜನರ ಜೀವನ ಅಸ್ಥವ್ಯಸ್ಥವಾಗಿತ್ತು. ಆ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.

 ಜಿಲ್ಲೆಯಲ್ಲಿ ಸಾಂಕ್ರಾಮಿಕ ರೊಗಗಳ ಹಾವಳಿಯೂ ಹೆಚ್ಚಿದ್ದು, ಜನರ ಬದುಕು ಶೋಚನೀಯವಾಗಿದೆ. ರಸ್ತೆಗಳ ಸಂಪರ್ಕ ಕಡಿದ ಪರಿಣಾಮ ಶಾಲೆಗೆ ಹೋಗಬೇಕಾದ ಮಕ್ಕಳು ಮನೆಯಲ್ಲಿಯೇ ಉಳಿಯುವಂತಾಗಿದೆ. ವಯೋವೃದ್ಧರು, ಹಸುಗೂಸುಗಳು, ಬಾಣಂತಿಯರು ಸರಿಯಾದ ಚಿಕಿತ್ಸೆ ಸಿಗದೆ ಜೀವನ್ಮರಣದಲ್ಲಿ ಜೀವನದೂಡುತ್ತಿದ್ದಾರೆ. ಮಳೆ ಹಾನಿಯಿಂದ ರೇಶನ್‌ಕಾರ್ಡ್, ಆಧಾರ್‌ಕಾರ್ಡ್ ಕಳೆದುಕೊಂಡವರಿಗೆ ಶೀಘ್ರವಾಗಿ ಸಿಗುವಂತೆ ಮಾಡಬೇಕು, ಮಳೆ-ನೆರೆ ಸಂತ್ರಸ್ತರಿಗೆ ಹತ್ತು ತಿಂಗಳವರೆಗೆ ಉಚಿತವಾಗಿ ಎಲ್ಲಾ ರೀತಿಯ ರೇಶನ್ ನೀಡಬೇಕು, ಮಳೆ-ನೆರೆ ಹಾನಿಯಿಂದ ಜಮೀನು ಮತ್ತು ಕೃಷಿ ಉತ್ಪನ್ನ ಕಳೆದುಕೊಂಡ ಸಂತ್ರಸ್ತ ರೈತರಿಗೆ ಬೆಳೆ ನಷ್ಟ ತುಂಬಿ ಕೊಡಬೇಕು, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದವರಿಗೆ ಶೀಘ್ರ ಮನೆ ನಿರ್ಮಿಸಿಕೊಡಬೇಕು, ಕೊಚ್ಚಿ ಹೋದ ಸೇತುವೆ ಮತ್ತು ಕಾಲುಸಂಕಗಳನ್ನು ಪುನಃ ನಿರ್ಮಿಸಿ ಸಂಪರ್ಕಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News