ಲೈಂಗಿಕ ಕಿರುಕುಳ ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಜಾರಿಗೆ ಆಗ್ರಹ

Update: 2019-08-21 15:24 GMT

ಮಂಗಳೂರು, ಆ.21:ದ.ಕ.ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತವು ಕುಸಿಯುತ್ತಿರುವುದನ್ನು ಮಹಿಳಾ ಪರ ಸಮಿತಿಗಳು ಮತ್ತು ಇಲಾಖೆಯು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆಯ ಹೆಜ್ಜೆಯಿಡಬೇಕು ಎಂದು ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಆ್ಯಂಡ್ ಎಜುಕೇಶನ್‌ನ ಅಧ್ಯಕ್ಷೆ ರೀಟಾ ನೊರೊನ್ಹಾ ಕರೆ ನೀಡಿದರು.

ದ.ಕ.ಜಿಲ್ಲಾಡಳಿತ, ಜಿಪಂ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ‘ಹೆಣ್ಣು ಮಗುವನ್ನು ರಕ್ಷಿಸಿ-ಹೆಣ್ಣು ಮಗುವನ್ನು ಓದಿಸಿ’ ಕಾರ್ಯಕ್ರಮದಡಿ ಪ್ರಸವ ಪೂರ್ವ ಲಿಂಗ ಪತ್ತೆ ತಡೆ ಕಾಯ್ದೆ 1994ನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಸಮಿತಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಿಂಗತ್ವ ಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರೂಣ ಹತ್ಯೆ ನಿಷೇಧ, ಮಹಿಳಾ ಸಬಲೀಕರಣ, ಶಿಕ್ಷಣ, ಮಹಿಳೆಯರ ಪರ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಮಾನವೀಯತೆಯನ್ನು ಸಮಾಜಕ್ಕೆ ತಿಳಿಯಪಡಿಸುವ ಅಗತ್ಯತೆ ಹೆಚ್ಚಿದೆ ಎಂದು ರೀಟಾ ನೊರೊನ್ಹಾ ಹೇಳಿದರು.

ಸಮೀಕ್ಷಾ ಸಮಿತಿ, ಲಿಂಗತ್ವ ಸಮಾತ ಸಾಂಸ್ಥೀಕರಣ ಸಮಿತಿ, ಮಾಧ್ಯಮ ಸಮಿತಿ, ಸಂವಹನ ಸಮಿತಿ, ಮಾಹಿತಿ ತಂತ್ರಜ್ಞಾನ ಸಮಿತಿ, ಮನಸ್ಥಿತಿ ಸಮಿತಿಗಳನ್ನು ರಚಿಸಲಾಗಿದೆ. ಇವುಗಳ ಉದ್ದೇಶವೇ ಲಿಂಗಾನುಪಾತವನ್ನು ಸರಿದೂಗಿಸುವುದು ಮತ್ತು ಹೆಣ್ಣು ಮಕ್ಕಳ ರಕ್ಷಣೆ ಮತ್ತು ಅವರ ಶಿಕ್ಷಣದ ಮಟ್ಟವನ್ನು ವೃದ್ಧಿಸುವುದಾಗಿದೆ. ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಾಗ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಿ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಆರೋಪಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ಮಾಡುವುದಾಗಿದೆ. ಮಹಿಳೆಯರ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸು ಅಗತ್ಯವಿದೆ ಎಂದು ಸಮನ್ವಯ ಸಮಿತಿಯ ಕಾರ್ಯದರ್ಶಿ ಡಾ. ಶರ್ಲಿ ಡಿ. ಬಾಬು ಹೇಳಿದರು.

ಜಿಲ್ಲೆಯಲ್ಲಿ ಲಿಂಗಾನುಪಾತ ಕಡಿಮೆ ಇರುವ ಮತ್ತು ಹೆಚ್ಚಿರುವ ತಲಾ ಎರಡು ಗ್ರಾಪಂಗಳನ್ನು ಆಯ್ಕೆ ಮಾಡಿ ಅಧ್ಯಯನಕ್ಕೆ ಒಳಪಡಿಸುವುದು ಮತ್ತು ಈ ಲಿಂಗಾನುಪಾತದ ಅಸಮತೋಲನಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಕಾನೂನಿನಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಡೀಡ್ಸ್ ಸಂಸ್ಥೆಯ ನಿರ್ದೇಶಕ ಮಾರ್ಲಿನ್ ಮಾರ್ಟಿಸ್ ಹೇಳಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ಸುಂದರ ಪೂಜಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಸಿಕಂದರ್ ಪಾಶಾ, ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಅನಿತಾ ರವಿಶಂಕರ್, ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News