ಮತ್ತೊಮ್ಮೆ ಕುಸಿತ: ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಅಭಿವೃದ್ಧಿ ದರ 5.7 ಶೇ.

Update: 2019-08-21 15:35 GMT

ಹೊಸದಿಲ್ಲಿ, ಆ.21: ಈ ವರ್ಷದ ಎಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.5.7ರಷ್ಟಿರಲಿದೆ ಎಂದು ಜಾಗತಿಕ ವಿತ್ತ ಸೇವಾ ಸಂಸ್ಥೆ ನೊಮುರಾದ ವರದಿ ತಿಳಿಸಿದೆ.

ಬಳಕೆ ಕಡಿಮೆಯಾಗಿರುವುದು, ದುರ್ಬಲ ಹೂಡಿಕೆ ಹಾಗೂ ಸೇವಾ ವಲಯದ ಲ್ಲಿ ಸಾಮರ್ಥ್ಯಕ್ಕಿಂತ ಕಡಿಮೆ ಪ್ರದರ್ಶನದಿಂದ ಈ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕ ಅವಧಿ(ಎಪ್ರಿಲ್‌ನಿಂದ ಜೂನ್)ಯಲ್ಲಿ ಜಿಡಿಪಿ ಇನ್ನಷ್ಟು ಮಂದಗತಿಯಲ್ಲಿರಲಿದೆ. ಆದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕತೆ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲಿದೆ ಎಂದು ನೊಮುರಾದ ಕಂಪೋಸಿಟ್ ಲೀಡಿಂಗ್ ಇಂಡೆಕ್ಸ್(ಸಿಎಲ್‌ಐ) ವರದಿ ತಿಳಿಸಿದೆ.

 2018-19ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಕಡಿಮೆಯಾಗಿದ್ದು, 2014-15ರ ಬಳಿಕ ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಗ್ರಾಹಕರ ವಿಶ್ವಾಸ ಕ್ಷೀಣಿಸುತ್ತಿರುವುದು, ವಿದೇಶಿ ನೇರ ಹೂಡಿಕೆ ಬಹುತೇಕ ತಟಸ್ಥವಾಗಿರುವುದು ಹಾಗೂ ಅಂತರಾಷ್ಟ್ರೀಯ ಕರೆನ್ಸಿ ಮತ್ತು ವ್ಯಾಪಾರ ಸಂಘರ್ಷ ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಹುದು ಎಂದು ವರದಿ ತಿಳಿಸಿದೆ.

 ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧಿಕಾರಿಗಳು ಹಾಗೂ ಉದ್ಯಮರಂಗದ ಮುಖಂಡರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದು, ಗ್ರಾಹಕರ ಬೇಡಿಕೆ ಹಾಗೂ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ಕ್ರಮಗಳನ್ನು ಸರಕಾರ ಜಾರಿಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News