ಸೇನಾ ಪುನರ್‌ವ್ಯವಸ್ಥೀಕರಣದ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಸ್ತು

Update: 2019-08-21 15:36 GMT

ಹೊಸದಿಲ್ಲಿ, ಆ.21: ಕ್ಷೇತ್ರ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ಸೇನಾ ಕೇಂದ್ರಕಚೇರಿಯಲ್ಲಿನ 206 ಅಧಿಕಾರಿಗಳ ನಿಯೋಜನೆ,ಪ್ರತ್ಯೇಕ ಜಾಗೃತ ಘಟಕ ಮತ್ತು ಮಾನವ ಹಕ್ಕುಗಳ ಕುರಿತು ದೂರುಗಳ ಪರಿಶೀಲನೆಗೆ ವಿಶೇಷ ವಿಭಾಗದ ರಚನೆ ಸೇರಿದಂತೆ ಸೇನೆಯಲ್ಲಿ ಪುನರ್‌ವ್ಯವಸ್ಥೀಕರಣದ ಪ್ರಸ್ತಾವಗಳ ಮೊದಲ ಕಂತಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಒಪ್ಪಿಗೆ ನೀಡಿದ್ದಾರೆ.

 ತನ್ನ 13 ಲಕ್ಷ ಬಲದ ಪಡೆಯನ್ನು ಅಗತ್ಯಕ್ಕೆ ತಕ್ಕಂತೆ ಮರುವಿನ್ಯಾಸಗೊಳಿಸಲು ಮತ್ತು ಅದರ ಹೋರಾಟ ಸಾಮರ್ಥ್ಯವನ್ನು ಹೆಚ್ಚಿಸಲು ಸೇನೆಯು ಕಳೆದ ವರ್ಷ 12 ಸ್ವತಂತ್ರ ಅಧ್ಯಯನಗಳ ಆಧಾರದಲ್ಲಿ ಪುನರ್‌ರಚನೆ ಮತ್ತು ಪುನರ್‌ಸಂಘಟನೆಯ ಮಾರ್ಗಸೂಚಿಯನ್ನು ಅಂತಿಮಗೊಳಿಸಿತ್ತು.

ಪ್ರಸ್ತಾವಗಳಂತೆ ಮೂವರು ಮೇಜರ್ ಜನರಲ್‌ಗಳು,ಎಂಟು ಬ್ರಿಗೇಡಿಯರ್‌ಗಳು,ಒಂಭತ್ತು ಕರ್ನಲ್‌ಗಳು ಮತ್ತು 168 ಲೆ.ಕರ್ನಲ್‌ಗಳು/ಮೇಜರ್‌ಗಳು ಸೇರಿದಂತೆ 206 ಸೇನಾಧಿಕಾರಿಗಳನ್ನು ಕೇಂದ್ರ ಕಚೇರಿಯಿಂದ ಸ್ಥಾನಾಂತರಿಸಿ ವಿವಿಧ ಕ್ಷೇತ್ರ ಮತ್ತು ಘಟಕಗಳ ರಚನೆಗೆ ಅವರನ್ನು ಲಭ್ಯವಾಗಿಸಲಾಗುವುದು.

ಸೇನಾ ಮುಖ್ಯಸ್ಥರ ನೇತೃತ್ವದಲ್ಲಿ ಪ್ರತ್ಯೇಕ ಜಾಗೃತ ಘಟಕವನ್ನು ಸ್ಥಾಪಿಸಲಾಗುವುದು ಮತ್ತು ಮೂರೂ ಸಶಸ್ತ್ರ ಪಡೆಗಳ ಪ್ರತಿನಿಧಿಗಳು ಇದರಲ್ಲಿರುತ್ತಾರೆ. ಹಾಲಿ ವಿವಿಧ ಏಜೆನ್ಸಿಗಳ ಮೂಲಕ ಜಾಗ್ರತ ವಿಭಾಗವು ಕಾರ್ಯಾಚರಿಸುತ್ತಿದೆ.

 ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ನಿಗಾಯಿರಿಸಲು ವ್ಮೆಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಅವರ ನೇರ ಅಧೀನದಲ್ಲಿ ಮೇಜರ್ ಜನರಲ್ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ಮಾನವ ಹಕ್ಕುಗಳ ವಿಭಾಗವನ್ನು ಸ್ಥಾಪಿಸಲಾಗುವುದು ಮತ್ತು ಇದು ಮಾನವ ಹಕ್ಕುಗಳ ವರದಿಗಳನ್ನು ಪರಿಶೀಲಿಸುವ ನೋಡಲ್ ಘಟಕವಾಗಿರುತ್ತದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News