ಇನ್ನೂ ಮಂಜೂರಾಗದ ವಿದ್ಯಾರ್ಥಿ ವೇತನ: ಕ್ಯಾಂಪಸ್ ಫ್ರಂಟ್‌ನಿಂದ ಹೋರಾಟದ ಎಚ್ಚರಿಕೆ

Update: 2019-08-21 16:23 GMT

ಮಂಗಳೂರು, ಆ.21: ಸರಕಾರದಿಂದ ಪ್ರತಿ ವರ್ಷ ನೀಡುವ ಪೋಸ್ಟ್ ಮೆಟ್ರಿಕ್, ಪ್ರೀ ಮೆಟ್ರಿಕ್ ಅರಿವು, ವಿದ್ಯಾಸಿರಿ ಇತ್ಯಾದಿ ವಿದ್ಯಾರ್ಥಿ ವೇತನಗಳನ್ನು ರಾಜ್ಯದ ಹಲವು ವಿದ್ಯಾರ್ಥಿಗಳಿಗೆ ಇನ್ನೂ ಮಂಜೂರಾಗದಿರುವುದನ್ನು ಖಂಡಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೋರಾಟದ ಎಚ್ಚರಿಕೆ ನೀಡಿದೆ.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರವು ಎಲ್ಲ ವಿದ್ಯಾರ್ಥಿ ವೇತನವನ್ನು ಆನ್‌ಲೈನ್ ಸೇವೆ ಮಾಡಿ ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ, 2017-18 ಮತ್ತು 2018-19 ನೇ ಸಾಲಿನ ಹಲವು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಬಾಕಿಯಿಟ್ಟು ವಿದ್ಯಾರ್ಥಿಗಳನ್ನು ವಂಚನೆ ಮಾಡುತ್ತಿದೆ ಎಂದು ಸಿಎಫ್‌ಐ ಟೀಕಿಸಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಸಂದರ್ಭ ಹಲವು ತಾಂತ್ರಿಕ ದೋಷಗಳು ಎದುರಿಸುತ್ತಿದ್ದು, ಅರ್ಜಿಯ ಪರಿಶೀಲನೆ ನಂತರ ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನದಲ್ಲೂ ಕೂಡ ವಿಳಂಬ ಮಾಡಲಾಗುತ್ತಿದೆ. ಶೈಕ್ಷಣಿಕ ವರ್ಷದ ಕೊನೆ ಅಂದರೆ ಡಿಸೆಂಬರ್-ಜನವರಿ ಒಳಗಡೆ ಬರಬೇಕಾದ ವಿದ್ಯಾರ್ಥಿ ವೇತನ ಹೊಸ ವರ್ಷ ಆರಂಭವಾದರೂ ಕೈಗೆ ಸಿಗದಿರುವುದು ಅಲ್ಪಸಂಖ್ಯಾತ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಗಳಿಗೆ ಭೇಟಿ ನೀಡಿದಾಗ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸಹಕರಿಸುತ್ತಿಲ್ಲ, ತಾಂತ್ರಿಕ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮತ್ತು ಅಸಡ್ಡೆ ತೋರುತ್ತಿದ್ದಾರೆ. ವರ್ಷಗಳ ಅರ್ಜಿಗಳು ಕೆಎಂಡಿಸಿ ಕಚೇರಿಯಲ್ಲಿ ಮಂಜೂರಾಗದೆ ಬಾಕಿಯಾಗಿದೆ ಎಂದು ಸಿಎಫ್‌ಐ ಆರೋಪಿಸಿದೆ.

ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದ ಪರಿಣಾಮ ಕಾಲೇಜಿನ ಶುಲ್ಕ ಪಾವತಿ ಮಾಡದೆ ತೊಂದರೆಗೊಳಗಾಗಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ಶುಲ್ಕ ಪಾವತಿ ಮಾಡದ ಕಾರಣದಿಂದ ಪರೀಕ್ಷಾ ಪ್ರವೇಶಾತಿ ಪಡೆಯಲಾಗದೆ ತೊಂದರೆಗೀಡಾಗಿದ್ದಾರೆ. ಆದುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯನ್ನಿಟ್ಟು ಸಿಎಫ್‌ಐ ರಾಜ್ಯಾದ್ಯಂತ ವಿದ್ಯಾರ್ಥಿ ವೇತನ ಶೀಘ್ರ ವಿತರಣೆಗಾಗಿ ಆಗ್ರಹಿಸುತ್ತಿದೆ. ವಿಳಂಬವಾದಲ್ಲಿ ಅಲ್ಪಸಂಖ್ಯಾತ ಇಲಾಖೆಯ ವಿರುದ್ಧ ಹೋರಾಟವನ್ನು ಸಂಘಟಿಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News