ಅಧಿಕಾರಿಗಳು ಕಚೇರಿಯಿಂದ ಹೊರಬಂದು ಕ್ಷೇತ್ರದಲ್ಲಿ ಕೆಲಸ ಮಾಡಿ: ನೂತನ ಜಿಲ್ಲಾಧಿಕಾರಿ ಜಿ.ಜಗದೀಶ್ ಕರೆ

Update: 2019-08-21 16:26 GMT

ಉಡುಪಿ, ಆ.21: ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕ್ಷೇತ್ರಗಳಿಗೆ ತೆರಳಿ, ಜನರ ಸಮಸ್ಯೆಗಳನ್ನು ಆಲಿಸಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕ್ಷೇತ್ರಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಅರಿಯಬೇಕು ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಬೇಕು. ಅಲ್ಲದೇ ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ಪರಿಶೀಲಿಸಬೇಕು. ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸಿ, ತಮ್ಮ ಕೆಲಸ ಕಾರ್ಯ ಗಳನ್ನು ಮುಗಿಸುವಂತೆ ಹಾಗೂ ಕರ್ತವ್ಯದ ಅವಧಿಯಲ್ಲಿ ವೃಥಾ ಕಾಲಹರಣ ಮಾಡದೇ ನಿಗದಿತ ಸಮಯದಲ್ಲಿ ಗುಣಮಟ್ಟದ ಕೆಲಸ ನಿರ್ವಹಿಸುವುದಕ್ಕೆ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು.

ತಾನು ಎಲ್ಲಾ ಜಿಲ್ಲಾ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸು ವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಗೌರವಿಸಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಅನಾವಶ್ಯಕವಾಗಿ ಅವರನ್ನು ವಿವಿಧ ಕಚೇರಿಗಳಿಗೆ ಅಲೆದಾಡಿಸಬೇಡಿ. ನಿಮ್ಮ ಕಚೇರಿಯಲ್ಲಿ ಸಾರ್ವಜನಿಕರು ಕೋರುವ ಸೇವೆ ಇಲ್ಲವಾದಲ್ಲಿ, ಸಂಬಂದಪಟ್ಟ ಇಲಾಖೆಗೆ ತೆರಳಿ ಆ ಸೌಲಭ್ಯ ಪಡೆಯುವ ಬಗ್ಗೆ ಅವರಿಗೆ ಮಾಹಿತಿ ನೀಡಿ. ಸಾರ್ವಜನಿಕರಿಂದ ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಿ ಎಂದು ಜಗದೀಶ್ ಹೇಳಿದರು.

ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ಆಪ್ ಮಾಡಿಡಬಾರದು. ಕೂಡಲೇ ಕರೆ ಮಾಡಿದಲ್ಲಿ ಸಿಗುವಂತಿರಬೇಕು. ಕೇಂದ್ರಸ್ಥಾನ ದಲ್ಲಿ ಲ್ಯರಿದ್ದು, ಕೇಂದ್ರ ಸ್ಥಾನದಿಂದ ಹೊರಹೋಗುವಾಗ ಅನುಮತಿ ಪಡೆದು ಹೋಗುವಂತೆ ತಿಳಿಸಿದ ಡಿಸಿ, ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಸ್ಪಷ್ಟ ಅಭಿಪ್ರಾಯ ಗಳೊಂದಿಗೆ ಪೂರ್ಣ ದಾಖಲೆಗಳ ಸಮೇತ ಸಲ್ಲಿಸಿ. ಕಡತಗಳ ಶೀಘ್ರ ವಿಲೇವಾರಿಗೆ ಆದ್ಯತೆ ನೀಡುವಂತೆ ತಿಳಿಸಿದರು.

ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಒಂದು ತಂಡವಾಗಿ ಕೆಲಸ ಮಾಡಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವಂತೆ ತಿಳಿಸಿದ ಅವರು ಏನೇ ಸಮಸ್ಯೆಗಳಿದ್ದರೂ ನೇರವಾಗಿ ತಮ್ಮನ್ನು ಭೇಟಿಯಾಗಿ ಚರ್ಚಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಎಸ್ಪಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News