ರಾಜ್ಯ ಉಪ ಚುನಾವಣೆಯಲ್ಲಿ ಕೆಆರ್‌ಎಸ್ ಪಕ್ಷ ಸ್ಪರ್ಧೆ: ರವಿಕೃಷ್ಣಾ ರೆಡ್ಡಿ

Update: 2019-08-21 16:33 GMT

ಉಡುಪಿ, ಆ.21: ಹೊಸದಾಗಿ ಸ್ಥಾಪನೆಯಾಗಿರುವ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷವು ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆ ಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 17 ವಿಧಾನಸಭಾ ಕ್ಷೇತ್ರಗಳಿಗೆ ಕೆಲವೇ ತಿಂಗಳಲ್ಲಿ ನಡೆಯುವ ಉಪ ಚುನಾವಣೆ ಮತ್ತು ವಿವಿಧ ನಗರಪಾಲಿಕೆಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಹಿರಿಯ ಹೋರಾಟಗಾರರು, ಯುವ ರಾಜಕೀಯ ನಾಯಕರುಗಳು, ಪಕ್ಷವನ್ನು ಸೇರಿದ್ದು, ಮುಂದೆ ಮತ್ತಷ್ಟು ಮಂದಿ ಸೇರುವ ಆಸಕ್ತಿ ತೋರಿಸಿದ್ದಾರೆ. ಕರ್ನಾಟಕ, ಕನ್ನಡ ಮತ್ತು ನಾಡಿನ ಜಲ, ನೆಲ, ಜಲದ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಪಕ್ಷದ ಪ್ರಮುಖ ಧ್ಯೇಯವಾಗಿದ್ದು, ಇದನ್ನು ಒಪ್ಪಿಕೊಂಡು ಪಕ್ಷಕ್ಕೆ ಯಾರು ಕೂಡ ಬರಬಹುದು ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಹೆಚ್ಚಿನ ಒತ್ತು ನೀಡಲಿದೆ. ಉಡುಪಿ ಜಿಲ್ಲಾ ಸಮಿತಿಯನ್ನು ರಚನೆ ಮಾಡಿ ವಿವಿಧ ಘಟಕಗಳನ್ನು ಕೂಡ ರಚಿಸಿ, ಜಿಲ್ಲೆಯ ಜ್ವಲಂತ ಸಮಸ್ಯೆ ಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್.ಎಚ್., ಅಮೃತ್ ಶೆಣೈ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್., ರಾಜ್ಯ ಖಜಾಂಚಿ ಅರವಿಂದ್ ಕೆ.ಬಿ., ಬಾಬಣ್ಣ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News